ಮಂಗಳೂರು: ಹಿಟಾಚಿ ಯಂತ್ರ ಮಾರಾಟದ ನೆಪದಲ್ಲಿ ವಂಚನೆ; ಆರೋಪಿ ಸೆರೆ

ಮಂಗಳೂರು: ಹೊಸ ಮಾದರಿಯ ಹಿಟಾಚಿ ಯಂತ್ರ ಮಾರಾಟ ಮಾಡುವುದಾಗಿ ಮುಂಗಡವಾಗಿ ಗುತ್ತಿಗೆದಾರರಿಂದ 10 ಲಕ್ಷ ರೂ. ಪಡೆದು ಬಳಿಕ ವಂಚನೆ ಮಾಡಿರುವ ಪ್ರಕರಣದ ಆರೋಪಿ ಮಹಾರಾಷ್ಟ್ರದ ಯೋಧಮಾಲ್ ರಾಡಿಘಾಂವ್ ನಿವಾಸಿ ಅಮೋಲ್ ಸರ್ಜೆರಾವ್ ಉರ್ಕುಡೆ (23) ಎಂಬಾತನನ್ನು ನಗರದ ಬಂದರು ಪೊಲೀಸರು ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ.
ಎಂ.ಕುಮಾರೇಶ್ ಎಂಬವರು ತನ್ನ ಕೆಲಸಗಾರ ಕಿಶೋರ್ ಕುಮಾರ್ ಮೂಲಕ ಮಹಾರಾಷ್ಟ್ರದ ಅಮರಾವತಿ ಎಂಬಲ್ಲಿನ ಆರೋಪಿ ಅಮೋಲ್ ಸರ್ಜೆರಾವ್ ಉರ್ಕುಡೆ ಎಂಬಾತನ ಬಳಿಯಿರುವ ಹಿಟಾಚಿ ಬಗ್ಗೆ ಮಾಹಿತಿ ಪಡೆದು ಅದನ್ನು ಖರೀದಿಸಲು ನಿರ್ಧರಿಸಿದ್ದರು. ಅದರಂತೆ ಅಮೋಲ್ ಸರ್ಜೆರಾವ್ ಉರ್ಕುಡೆ ಜತೆ ಮೊಬೈಲ್ ಮೂಲಕ ಮಾತುಕತೆ ನಡೆಸಿ 13 ಲಕ್ಷ ರೂ.ಗೆ ಖರೀದಿಸಲು ಬಯಸಿದ್ದರು. ಹಾಗೇ 10 ಲಕ್ಷ ರೂ.ವನ್ನು ಆರೋಪಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು.
ಬಳಿಕ ಹಿಟಾಚಿ ತರಲು ಕಿಶೋರ್ ಕುಮಾರ್‌ನನ್ನು ಮಹಾರಾಷ್ಟ್ರಕ್ಕೆ ಕಳುಹಿಸಿದ್ದರು. ಆದರೆ ಅಲ್ಲಿ ಹೋಗಿ ಆರೋಪಿಗೆ ಕರೆ ಮಾಡಿದಾಗ ಆತನ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಆರೋಪಿ ಹಣ ಪಡೆದು ಹಿಟಾಚಿ ಯಂತ್ರ ನೀಡದೆ ಹಾಗೂ ಹಣವನ್ನು ವಾಪಸ್ ಕೊಡದೆ ನಂಬಿಕೆಗೆ ದ್ರೋಹ ಮತ್ತು ಮೋಸ ಮಾಡಿರುವುದಾಗಿ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣವನ್ನು ದಾಖಲಿಸಿಕೊಂಡ ಬಂದರ್ ಠಾಣೆಯ ಪೊಲೀಸರು ಮಹಾರಾಷ್ಟ್ರಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.







