ಬದಲಾದ ಜೀವನಕ್ರಮಗಳಿಂದ ಮಕ್ಕಳಲ್ಲಿಯೂ ಮಧುಮೇಹ: ಡಾ.ಆರ್.ಎನ್. ಭಟ್
ಆಶಾ ಕಾರ್ಯಕರ್ತರಿಗೆ ಮಧುಮೇಹದ ಕುರಿತ ಅರಿವು ಕಾರ್ಯಾಗಾರ

ಉಡುಪಿ : ಈ ಹಿಂದೆ ಮುಧುಮೇಹ ಪೀಡಿತ ತಂದೆತಾಯಿಯನ್ನು ಮಕ್ಕಳು ವೈದ್ಯರ ಬಳಿಗೆ ಕರೆದುಕೊಂಡು ಬರುತ್ತಿದ್ದರೆ, ಈಗ ತಂದೆತಾಯಿಯೇ ಮಕ್ಕಳನ್ನು ವೈದ್ಯರ ಬಳಿಗೆ ಕರೆದುಕೊಂಡು ಬರುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಇಂದಿನ ಬದಲಾದ ಜೀವನ ಕ್ರಮಗಳಿಂದ ಮಕ್ಕಳಲ್ಲಿಯೂ ಮಧುಮೇಹ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಹಿರಿಯ ಪಿಶೀಷಿಯನ್ ಡಾ.ಆರ್.ಎನ್. ಭಟ್ ಹೇಳಿದ್ದಾರೆ.
ಭಾರತೀಯ ವೈದ್ಯಕೀಯ ಸಂಘ(ಐಎಂಎ) ಉಡುಪಿ -ಕರಾವಳಿ ಶಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಲಯನ್ಸ್ ಕ್ಲಬ್ ಮಣಿಪಾಲ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಉಡುಪಿ ಜಿಲ್ಲೆಯ ಆಶಾ ಕಾರ್ಯಕರ್ತರಿಗಾಗಿ ಬ್ರಹ್ಮಗಿರಿಯ ಐಎಂಎ ಭವನದಲ್ಲಿ ರವಿವಾರ ಆಯೋಜಿಸಲಾದ ಮಧುಮೇಹದ ಬಗ್ಗೆ ಅರಿವು, ತಪಾಸಣೆ ಮತ್ತು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪ್ರತಿ ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿ ಸುಮಾರು 300 ಮನೆಗಳಿಗೆ ಭೇಟಿ ನೀಡುತ್ತಿರುತ್ತಾರೆ. ಇವರಿಗೆ ಮಧುಮೇಹದ ಬಗ್ಗೆ ಅರಿವು ಮೂಡಿಸಿದರೆ ಆ ಎಲ್ಲ ಮನೆಗಳಿಗೂ ಇದರ ಕುರಿತು ಸರಿಯಾದ ಮಾಹಿತಿ ದೊರೆಯಲು ಸಾಧ್ಯವಾಗುತ್ತದೆ. ಜೀವನ ಶೈಲಿಯ ಬದಲಾವಣೆ ಮತ್ತು ಸರಿ ಯಾದ ಶಿಕ್ಷಣ ನೀಡುವುದರಿಂದ ಮಧುಮೇಹವನ್ನು ತಡೆಯಬಹುದಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಐಎಂಎ ಉಡುಪಿ ಕರಾವಳಿ ಅಧ್ಯಕ್ಷ ಡಾ.ಪಿ.ವಿ.ಭಂಡಾರಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಯಬಿಟಾಲೋಜಿಸ್ಟ್ ಡಾ.ಶ್ರುತಿ ಬಲ್ಲಾಳ್ ಮತ್ತು ಗೈನೊಕೊಲೋಜಿಸ್ಟ್ ಡಾ.ರಾಜಲಕ್ಷ್ಮೀ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ನಾಗರತ್ನ, ಮಣಿಪಾಲ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೇಶವ ರಾಯ ಪೈ, ಗಣೇಶ್ ಪೈ, ಐಎಂಎ ಪ್ರಧಾನ ಕಾರ್ಯದರ್ಶಿ ಡಾ.ಕೇಶವ ನಾಯಕ್ ಉಪಸ್ಥಿತರಿದ್ದರು.







