ಮಣಿಪಾಲ: ಎರಡೂ ಕಣ್ಣಿನಲ್ಲಿ ವೀಕ್ಷಿಸಬಹುದಾದ ದೂರದರ್ಶಕ ಆವಿಷ್ಕಾರ!

ಉಡುಪಿ : ನೇರವಾಗಿ ಆಕಾಶದಲ್ಲಿನ ಗ್ರಹಗಳನ್ನು ನೋಡಲು ಅನುಕೂಲವಾಗುವಂತಹ ಒಂದು ಹೊಸ ಬೈನಾಕ್ಯುಲರ್ (ದೂರದರ್ಶಕ)ನ್ನು ಮಣಿಪಾಲದ ಎಂಐಟಿಯ ಉದ್ಯೋಗಿ ಆರ್.ಮನೋಹರ್ ಆವಿಷ್ಕಾರ ಮಾಡಿದ್ದಾರೆ.
ಇದು 15 ಎಕ್ಸ್ ಝೂಮ್‌ಲೆನ್ಸ್ ಹೊಂದಿದೆ. ಇದರಲ್ಲಿ 30 ಎಕ್ಸ್ ಝೂಮ್ ಲೆನ್ಸ್ ಕೂಡ ಬಳಕೆ ಮಾಡಬಹುದು. ಎರಡೂ ಕಣ್ಣುಗಳನ್ನು ಉಪಯೋಗಿಸಿ ಈ ಬೈನಾಕ್ಯುಲರ್‌ನಲ್ಲಿ ಗ್ರಹಗಳ ವೀಕ್ಷಣೆ ಮಾಡಬಹುದಾಗಿದೆ. ನೇರ ಪ್ರತಿಬಿಂಬದೊಂದಿಗೆ ಗ್ರಹಗಳು ಕಾಣಸಿಗುತ್ತವೆ ಎಂದು ಆರ್.ಮನೋಹರ್ ತಿಳಿಸಿದರು.
ಒಂದು ವರ್ಷದ ಸತತ ಪ್ರಯತ್ನದ ಮೂಲಕ ಈ ಬೈನಾಕ್ಯುಲರ್‌ನ್ನು ಅಭಿವೃದ್ಧಿ ಪಡಿಸಲಾಗಿದೆ. ಇತ್ತೀಚಿನ ರೆಡಿಮೇಡ್ ದೂರದರ್ಶಕಗಳಲ್ಲಿ ಈವರೆಗೆ ಝೂಮ್‌ಲೆನ್ಸ್ ಪ್ರತ್ಯೇಕವಾಗಿ ಜೋಡಿಸಿ ವೀಕ್ಷಿಸಬಹುದಾದ ಬೈನಾಕ್ಯುಲರ್‌ಗಳು ಇಲ್ಲ. ಈ ನೂತನ ಆವಿಷ್ಕಾರಕ್ಕೆ ಪೇಟೆಂಟ್ ಕೂಡಾ ಲಭಿಸಿದೆ. ಈ ರೀತಿ ಆವಿಷ್ಕಾರಣೆ ಮಾಡಿ, ಪೇಟೆಂಟ್ ಪಡೆದ ಅಗ್ರಗಣ್ಯರ ಪಟ್ಟಿಯಲ್ಲಿ ಮನೋಹರ ಅವರ ಹೆಸರು ಕೂಡ ಅಂತರ್ಜಾಲದಲ್ಲಿದೆ.
ನ.8ರಂದು ನಡೆಯುವ ಚಂದ್ರಗ್ರಹಣವನ್ನು ವೀಕ್ಷಿಸಲು ಈ ಬೈನಾಕುಲರ್ ಬಳಸಲಾಗುವುದು. ಸಂಜೆ ಪಾರ್ಶ್ವಬಾಹು ಚಂದ್ರಗ್ರಹಣ ಇರುವುದರಿಂದ ಸಂಜೆ 5 ಗಂಟೆಯಿಂದ ಆರ್.ಮನೋಹರ್ ಆವಿಷ್ಕೃತ 4 ದೂರದರ್ಶಕದ ಮೂಲಕ ಗ್ರಹಣ ವೀಕ್ಷಣಾ ಕಾರ್ಯಕ್ರಮ ಆರಂಭಿಸಲಾಗುವುದು. ಜೊತೆಗೆ ಪಕ್ಕದ ವಿಹಂಗಮ ನೋಟಗಳಾದ ಕಾಪು ಲೈಟ್ ಹೌಸ್, ಮಲ್ಪೆ ಬೀಚ್, ಪರಂಪಳ್ಳಿ ಚರ್ಚ್ ಗೋಪುರ, ಉಡುಪಿಯ ಹಳೆಯ ಸಿಂಡಿಕೇಟ್ ಟವರ್, ಸಂತೆಕಟ್ಟೆಯ ಹಂಚಿನ ಫ್ಯಾಕ್ಟರಿಯ (ಕುಲುಮೆ) ಗೋಪುರ, ಆತ್ರಾಡಿ ಮಸೀದಿಯ ಮಿನಾರ್ ತೋರಿಸಲಾಗುವುದು ಎಂದು ಕಾರ್ಯಕ್ರಮ ಸಂಯೋಜಕ ಗಣೇಶ್ ರಾಜ್ ಸರಳಬೆಟ್ಟು ತಿಳಿಸಿದ್ದಾರೆ.








