ಕಾರ್ಮಿಕರು ರಾಜಕೀಯ ಪ್ರಜ್ಞಾವಂತರಾಗಬೇಕು: ವಿಜಯ ಭಾಸ್ಕರ್
ಎಐಟಿಯುಸಿ ಕಾರ್ಮಿಕ ಸಮಾವೇಶ

ಬಂಟ್ವಾಳ : ಕಾರ್ಮಿಕರು ಐತಿಹಾಸಿಕ ಚಳವಳಿಗಳ ಮೂಲಕ ಗಳಿಸಿರುವ ಕಾನೂನು ಸವಲತ್ತುಗಳು ನಿರ್ನಾಮ ವಾಗುತ್ತಿದೆ. ಕಾರ್ಮಿಕ ವರ್ಗವನ್ನು ವಿಭಜಿಸುವ ಸಂಚುಗಳು ನಡೆಯುತ್ತಲೇ ಇದೆ. ಜಾತಿ, ಧರ್ಮದ ಹೆಸರಿನಲ್ಲಿ ಕಾರ್ಮಿಕರೊಳಗೆ ಸಂಘರ್ಷ ಹುಟ್ಟಿಸಿ ಅವರನ್ನು ಮಾನಸಿಕವಾಗಿ ಬೇರ್ಪಡಿಸುವ ಕುತಂತ್ರಗಳು ಮುನ್ನೆಲೆಗೆ ಬಂದಿದೆ. ಹಾಗಾಗಿ ಪ್ರಸಕ್ತ ಸನ್ನಿವೇಶದಲ್ಲಿ ಕಾರ್ಮಿಕರು ರಾಜಕೀಯ ಪ್ರಜ್ಞಾವಂತರಾಗಬೇಕು ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ಡಿ.ಎ. ಕರೆ ನೀಡಿದರು.
ಬಂಟ್ವಾಳದಲ್ಲಿ ಎಐಟಿಯುಸಿ ನೇತೃತ್ವದಲ್ಲಿ ರವಿವಾರ ನಡೆದ ಕಾರ್ಮಿಕ ಸಮಾವೇಶದಲ್ಲಿ ಅವರು ಮಾತನಾಡಿದರು.
ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ನಿಧಿಯನ್ನು ಸವಲತ್ತುಗಳ ಮೂಲಕ ಅರ್ಹ ಕಟ್ಟಡ ಕಾರ್ಮಿಕರಿಗೆ ನೀಡದೆ ರಾಜಕೀಯ ಸ್ವಾರ್ಥಕ್ಕಾಗಿ ಕಟ್ಟಡ ಕಾರ್ಮಿಕರಲ್ಲದ ಅನರ್ಹರಿಗೆ, ರಾಜಕೀಯ ಪುಢಾರಿಗಳಿಗೆ ನೀಡಲಾಗುತ್ತಿದೆ. ಈ ದಂಧೆಯಲ್ಲಿ 40 ಶೇಕಡಕ್ಕಿಂತಲೂ ಅಧಿಕ ಕಮಿಷನ್ ವ್ಯವಹಾರ ನಡೆಯುತ್ತಿರುವುದು ಸ್ಪಷ್ಟವಾಗಿದೆ. ಬಿಸಿಯೂಟ, ಅಂಗನವಾಡಿ, ಆಶಾ ಕಾರ್ಮಿಕರನ್ನು ಸಮಯದ ಮಿತಿ ಇಲ್ಲದೆ ದುಡಿಸಿ ಅವರಿಗೆ ಕನಿಷ್ಠ ಸವಲತ್ತುಗಳನ್ನು ನೀಡದೆ, ಅವರ ಸೇವೆಯನ್ನು ಖಾಯಂಗೊಳಿಸದೆ ವಂಚಿಸಲಾಗುತ್ತಿದೆ ಎಂದು ವಿಜಯ ಭಾಸ್ಕರ್ ಆರೋಪಿಸಿದರು.
ಬೀಡಿ ಕಾರ್ಮಿಕರಿಗೆ ಕಾನೂನುಬದ್ಧವಾಗಿ ಪಾವತಿಸಬೇಕಾದ ಕನಿಷ್ಠ ಕೂಲಿ ತುಟ್ಟಿಭತ್ತೆಯನ್ನು ಪಾವತಿಸದೆ ಸರಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಈ ಬಗ್ಗೆ ಎಐಟಿಯುಸಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದೆ. ಸಾರಿಗೆ ನೌಕರರಿಗೆ ನ್ಯಾಯಾಲಯದ ಆದೇಶದ ಪ್ರಕಾರ ಮಜೂರಿ ಸವಲತ್ತುಗಳನ್ನು ಪಾವತಿಸಬೇಕಿದ್ದರೂ ಅವುಗಳನ್ನು ಪಾವತಿಸದೇ ಸಾರಿಗೆ ನಿಗಮವನ್ನೇ ಖಾಸಗೀಕರಿಸುವ ಹುನ್ನಾರ ನಡೆಯುತ್ತಿದೆ. ಈ ದೇಶದ ಬೆನ್ನೆಲುಬಾಗಿರುವ ರೈರಯ, ಕೃಷಿಕೂಲಿ ಕಾರ್ಮಿಕರನ್ನು ಕಡೆಗಣಿಸಲಾಗುತ್ತಿದೆ. ಇವೆಲ್ಲದರ ವಿರುದ್ಧ ಕಾರ್ಮಿಕ ವರ್ಗ ಹೋರಾಟ ಮಾಡಬೇಕಿದೆ ಎಂದರು.
ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ, ಸಿಪಿಐ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ಎಐಟಿಯುಸಿ ರಾಜ್ಯ ಮುಖಂಡ ವಿ.ಕುಕ್ಯಾನ್, ಜಿಲ್ಲಾ ಕೋಶಾಧಿಕಾರಿ ಎ.ಪ್ರಭಾಕರ ರಾವ್, ಜಿಲ್ಲಾ ಸಹ ಕಾರ್ಯದರ್ಶಿ ಸುರೇಶ್ ಕುಮಾರ್, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಭಾರತಿ ಪ್ರಶಾಂತ್ ಮಾತನಾಡಿದರು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಮುಂದಾಳು ಶಶಿಕಲಾ ಗಿರೀಶ್, ತಾಲೂಕು ಮುಖಂಡರಾದ ಒ.ಕೃಷ್ಣ, ರಾಮ, ದೇರಣ್ಣ ಪೂಜಾರಿ ಉಪಸ್ಥಿತರಿದ್ದರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಎಸ್. ಬೇರಿಂಜ ಸ್ವಾಗತಿಸಿದರು. ಎಐಟಿಯುಸಿ ಜಿಲ್ಲಾ ಸಹಕಾರ್ಯದರ್ಶಿ ಎಂ. ಕರುಣಾಕರ ವಂದಿಸಿದರು.