ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಆಹೋರಾತ್ರಿ ಧರಣಿ

ಸುರತ್ಕಲ್, ನ. 6: ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಸುತ್ತಿರುವ ಧರಣಿಗೆ ಬೆಲೆ ಕೊಟ್ಟು ಟೋಲ್ ಗೇಟ್ ತೆರವು ಗೊಳಿಸಬೇಕು ಎಂದು ಕೇರಳ ರಾಜ್ಯ ಶಾಲಾ ಶಿಕ್ಷಕರ ಸಂಘದ ಕಾಸರಗೋಡು ಜಿಲ್ಲಾ ಮುಖಂಡ ಶ್ಯಾಮ ಭಟ್ ಯು. ಹೇಳಿದರು.
ಸುರತ್ಕಲ್ ಟೋಲ್ ಗೇಟ್ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು.
ದೇಶದ ಸಂಪತ್ತೆಲ್ಲವನ್ನು ಕೆಂದ್ರ ಸರಕಾರ ಲೂಟಿಕೋರರ ಕೈಗೆ ನೀಡುತ್ತಿದೆ. ತುಳುನಾಡಿನ ಜನರು ಬೆವರನ್ನು ರಕ್ತವಾಗಿಸಿಕೊಂಡು ಸ್ಥಾಪಿಸಿದ್ದ ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಗಳನ್ನು ಗುಜರಾತಿಗೆ ಮಾರಾಟ ಮಾಡಿದರು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಕೈಗೆ ನೀಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದರು.
ಈ ಸಂದರ್ಭ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಸಹ ಸಂಚಾಲಕರಾದ ಬಿ.ಕೆ. ಇಮ್ತಿಯಾಝ್, ರಾಘವೆಂದ್ರ ರಾವ್ ಸೇರಿದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರು, ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು, ಶಿಲ್ಲೆಖ್ಯಾತ ಸಂಘಟನೆ ಕಾರ್ಯಕರ್ತರು ಸೇರಿದಂತೆ ಹಲವು ವಿವಿಧ ಸಮಾನ ಮನಸ್ಕ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು.