ಬೆಂಗಳೂರಿನಲ್ಲಿ ರಸ್ತೆ ಅಪಘಾತ: ಮಂಗಳೂರು ಮೂಲದ ಸಾಮಾಜಿಕ ಹೋರಾಟಗಾರ ಮೃತ್ಯು

ಮಂಗಳೂರು: ಬೆಂಗಳೂರು ಸಮೀಪದ ಕುಣಿಗಲ್ ಬಳಿ ಶನಿವಾರ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಮಂಗಳೂರು ಮೂಲದ ಸಾಮಾಜಿಕ ಹೋರಾಟಗಾರರೊಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಅಲೆಮಾರಿ ಸಮುದಾಯಗಳ ಪರ ಹೋರಾಟ ಮಾಡುತ್ತಿದ್ದ ಬಿಜೆಪಿಯಲ್ಲಿ ಸಕ್ರಿಯರಾಗಿದ್ದ ಭಾಸ್ಕರದಾಸ್ ಎಕ್ಕಾರು (65) ರಸ್ತೆ ಅಪಘಾತದಲ್ಲಿ ಮೃತಪಟ್ಟವರು.
ಶನಿವಾರ ಮಧ್ಯಾಹ್ನ ಬೆಂಗಳೂರು-ಮಂಗಳೂರು ರಾ.ಹೆ.ಯ ಕುಣಿಗಲ್ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭಾಸ್ಕರದಾಸ್ ಎಕ್ಕಾರ್ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಬೆಂಗಳೂರಿನ ಅಸ್ಪತ್ರೆಯ ತುರ್ತು ನಿಗಾ ವಿಭಾಗದಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಸಂಜೆ ಮೃತಪಟ್ಟಿದ್ದಾರೆ. ಸೋಮವಾರ ಬಜ್ಪೆ ಸಮೀಪದ ಎಕ್ಕಾರಿನ ಅವರ ಕೃಷಿ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಹಕ್ಕುಗಳ ಸಬಲೀಕರಣ ಸಚಿವಾಲಯದ ಡಿಎನ್‌ಟಿ-ಎಸ್‌ಎನ್‌ಟಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ, ಆರೆಸೆಸ್ಸ್ ಕರ್ನಾಟಕ ದಕ್ಷಿಣ ಪ್ರಾಂತದ ಧರ್ಮ ಜಾಗರಣಾ ಸಮನ್ವಯ ಪರಿಯೋಜನಾ ಪ್ರಮುಖ್ ಆಗಿ ಸೇವೆ ಸಲ್ಲಿಸಿದ್ದ ಭಾಸ್ಕರದಾಸ್ ಎಕ್ಕಾರು ಕೃಷಿಕರಾಗಿದ್ದರು.