ನ.11ರಿಂದ ಸಹ್ಯಾದ್ರಿ ಕಾಲೇಜ್ ನಲ್ಲಿ 5ನೇ ಆವೃತ್ತಿಯ 'ಏರೋಫಿಲಿಯಾ 2022 ಉತ್ಸವ'

ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ನ ಟೀಮ್ ಚ್ಯಾಲೆಂಜರ್ಸ್ ನ ಬಹು ನಿರೀಕ್ಷಿತ ಉತ್ಸವಗಳಲ್ಲಿ ಒಂದಾದ 5 ನೇ ಆವೃತ್ತಿಯ ಏರೋಫಿಲಿಯಾ 2022 ನವೆಂಬರ್ 11ರಿಂದ 13ವರಗೆ ನಿಗದಿಪಡಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥರಾದ ಡಾ. ಅನುಷ್ ಬೇಕಲ್, ಏರೋಫಿಲಿಯಾ ಮೂರು ದಿನಗಳ ರಾಷ್ಟ್ರೀಯ ಮಟ್ಟದ ಉತ್ಸವ ನಡೆಯಲಿದ್ದು, ನ. 11ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆ ಗೊಳ್ಳಲಿದೆ ಎಂದರು.
ಇದು ಹಲವಾರು ಉದಯೋನ್ಮುಖ ಎಂಜಿನಿಯರ್‌ಗಳು ಮತ್ತು ನವೋದ್ಯಮಿಗಳಿಗೆ ಮತ್ತು ಅವರ ನವೀನ ಚಿಂತನೆಗಳಿಗೆ ರೆಕ್ಕೆಯನ್ನು ನೀಡಿದೆ. ಈ ಉತ್ಸವವು ಯುವ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಅದ್ಭುತಗಳಿಂದ ರೋಮಾಂಚಿತಗೊಳಿಸಲು ಮತ್ತು ಗಣ್ಯ ವ್ಯಕ್ತಿಗಳೊಂದಿಗೆ ಸಂವಹನ ನಡೆಸಲು ಒಂದು ಅವಕಾಶವಾಗಿದೆ. ಏರೋಫಿಲಿಯಾ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ವೇದಿಕೆಯನ್ನು ಒದಗಿಸುವುದಲ್ಲದೇ, ಸಾಮಾಜಿಕ ಮಾನ್ಯತೆಯನ್ನು ಪಡೆಯಲು ಮತ್ತು ವೃತ್ತಿಪರ ಸಂಪರ್ಕವನ್ನು ವಿಸ್ತರಿಸಲು ಉತ್ತಮ ಮಾರ್ಗವಾಗಿದೆ ಎಂದರು.
ರಾಷ್ಟ್ರೀಯ ಉತ್ಸವದ ಈ 5ನೇ ಆವೃತ್ತಿಯು ಏರೋಫಿಲಿಯಾ 2016, 2017, 2018, ಮತ್ತು 2019 ರ ಸಮಗ್ರ ಅನುಭವವಾಗಿದೆ. ಭಾಗವಹಿಸುವವರು ರೇಡಿಯೋ ನಿಯಂತ್ರಿತ ವಿಮಾನವನ್ನು ಅದರ ಆಯಾಮ ಮತ್ತು ಪ್ರೊಪಲ್ಟನ್ ಸಿಸ್ಟಮ್‌ನಲ್ಲಿ ಕೆಲವು ಮಿತಿಗಳೊಂದಿಗೆ ವಿನ್ಯಾಸಗೊಳಿಸುವ ಅನುಭವ ಪಡೆಯುತ್ತಾರೆ. ಅಂತಾರಾಷ್ಟ್ರೀಯ ಖ್ಯಾತಿಯ ಆರ್‌ಸಿ ಫೈಯರ್‌ಗಳು ಏರ್ ಶೋಗಳನ್ನು ನಡೆಸಲಿದ್ದಾರೆ. ಐಐಟಿ ಮತ್ತು ಎನ್‌ಐಟಿಗಳಂತಹ ಗಣ್ಯ ಸಂಸ್ಥೆಗಳ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಏರೋಫಿಲಿಯಾ 2022 ಸುಮಾರು 4,000 ವಿದ್ಯಾರ್ಥಿಗಳನ್ನು ಆಕರ್ಷಿಸುವ ನಿರೀಕ್ಷೆಯಿದೆ. ವೃತ್ತಿಪರ ಫೈಯರ್ಸ್ ಗಳಿಂದ ವೈಮಾನಿಕ ಪ್ರದರ್ಶನ, ಐಷಾರಾಮಿ ಮತ್ತು ವಿದೇಶಿ ಕಾರುಗಳ ಪ್ರದರ್ಶನದೊಂದಿಗೆ ಮಂಗಳೂರಿನ ಅತಿದೊಡ್ಡ ಆಟೋ-ಎಕ್ಸ್‌ಪೋ, ISRO ಅಭಿವೃದ್ಧಿಪಡಿಸಿದ ನಾವಿಕ್ ತಂತ್ರಜ್ಞಾನದಲ್ಲಿನ ಸಮಸ್ಯೆಗಳ ಕುರಿತು ಹ್ಯಾಕಥಾನ್, ತಾಂತ್ರಿಕ ಭಾಷಣಗಳು, ಛಾಯಾಗ್ರಹಣ ಸ್ಪರ್ಧೆಗಳು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಭಾಗವಹಿಸುವವರನ್ನು ಆಕರ್ಷಿಸಲಿದೆ ಎಂದು ಕಾರ್ಯ ಕ್ರಮದ ಸಂಯೋಜಕರಾದ ಅಭಿನವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರೊ. ಚಂದ್ರ ಸಿಂಗ್, ಪ್ರಜ್ವಲ್, ರಚನಾ ಉಪಸ್ಥಿತರಿದ್ದರು.