ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗಲಿ: ಪ್ರೊ.ಯಡಪಡಿತ್ತಾಯ
‘ವಿಷ್ಣು ಮಂಗಲ’ ಇಂಗ್ಲಿಷ್ ಕಥಾ ಸಂಕಲನ ಬಿಡುಗಡೆ

ಮಂಗಳೂರು, ನ.7: ಪುಸ್ತಕಗಳನ್ನು ಓದುವವರ ಸಂಖ್ಯೆ ಹೆಚ್ಚಾಗಬೇಕು. ಯುವ ಜನತೆ ಓದಿನತ್ತ ಆಕರ್ಷಿತರಾಗುವ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದ್ದಾರೆ.
ಅವರು ಸೋಮವಾರ ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಡಾ.ವಸಂತಕುಮಾರ್ ಪೆರ್ಲ ಅವರ ಮೂಲ ಕನ್ನಡ ಕಥೆಗಳ ಇಂಗ್ಲಿಷ್ ಅನುವಾದ ಕೃತಿ ‘ವಿಷ್ಣುಮಂಗಲ’ ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಉತ್ತಮ ಪುಸ್ತಕಗಳನ್ನು ಓದುವವರು ಮತ್ತು ಪುಸ್ತಗಳನ್ನು ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಓದಿನತ್ತ ಆಸಕ್ತಿ ವಹಿಸುವ ಮೂಲಕ ಒಂದಷ್ಟು ಪುಸ್ತಕಗಳನ್ನು ಹೊರತರುವಲ್ಲಿಯೂ ಒತ್ತು ನೀಡಬೇಕು. ವಸಂತ ಕುಮಾರ್ ಪೆರ್ಲ ಅವರ ಕನ್ನಡ ಕಥೆಗಳನ್ನು ಬಿ.ಆರ್.ಭೀಮಾಚಾರ್ ಅವರು ‘ವಿಷ್ಣುಮಂಗಲ’ದ ಮೂಲಕ ಇಂಗ್ಲಿಷ್ ಕಥಾಸಂಕಲನ ಹೊರತಂದಿರುವುದರಿಂದ ಸಾಕಷ್ಟು ಓದುಗರನ್ನು ತಲುಪಲಿದೆ ಎಂದವರು ಹೇಳಿದರು.
ಕೃತಿಕಾರ ಡಾ.ವಸಂತಕುಮಾರ್ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಷ್ಣು ಮಂಗಲ ಎಂಬುದು ಆಧುನಿಕತೆಯತ್ತ ಮುಖ ಮಾಡಿದ ಸ್ವಾತಂತ್ರ್ಯ ನಂತರದ ಭಾರತದ ಹಳ್ಳಿಯೊಂದರ ಪ್ರತಿರೂಪ. ಹಳ್ಳಿಗಳಲ್ಲಿ ನಡೆಯುವ ವ್ಯವಹಾರಗಳು ಸಂಕೀರ್ಣವಾದ ಮನುಷ್ಯ ಸಂಬಂಧಗಳ ಮೂಲಕ ಕಲಾತ್ಮಕತೆ ಕಥೆಗಳಾಗಿ ರೂಪ ತಾಳಿವೆ ಎಂದು ವಸಂತಕುಮಾರ್ ಪೆರ್ಲ ಹೇಳಿದರು.
ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಸಾಪ ದ.ಕ.ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಉಪಸ್ಥಿತರಿದ್ದರು.