ನ.9ರಂದು ಐಸಿಎಐ ಎಂಎಸ್‌ಎಂಇ ಯಾತ್ರೆ ಮಂಗಳೂರಿಗೆ

ಮಂಗಳೂರು, ನ.7: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ)ದ ಎಂಎಸ್‌ಎಂಇ ಮತ್ತು ಸಾರ್ಟ್‌ಅಪ್ ಸಮಿತಿ ತನ್ನ ಶಾಖೆಗಳ ಮೂಲಕ ಐಸಿಎಐ ಎಂಎಸ್‌ಎಂಇ ಯಾತ್ರಾ ಮತ್ತು ಐಸಿಎಐ ಎಂಎಸ್‌ಎಂಇ ಸೇತು ಕಾರ್ಯಕ್ರಮ ಆಯೋಜಿಸಿದ್ದು, ಈ ಯಾತ್ರೆ ನ.9ರಂದು ಮಂಗಳೂರಿಗೆ ಆಗಮಿಸಲಿದೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಐಸಿಎಐ ಮಂಗಳೂರು ಅಧ್ಯಕ್ಷ ಪ್ರಸನ್ನ ಶೆಣೈ ಎಂ.,ಆಗಸ್ಟ್ ತಿಂಗಳಲ್ಲಿ ಆರಂಭವಾದ ಯಾತ್ರೆಯ ದೇಶದ 75 ನಗರಗಳಲ್ಲಿ, 75 ದಿನ 75 ಕಾರ್ಯಕ್ರಮಗಳನ್ನು ಎಂಎಸ್‌ಎಂಇಗಳ ಸಾಮರ್ಥ್ಯ ವೃದ್ಧಿಗಾಗಿ ಆಯೋಜಿಸಿದೆ. ಎಂಎಸ್‌ಎಂಇ ಭಾರತದ ಆರ್ಥಿಕತೆಯ ಬೆನ್ನೆಲುಬು ಆಗಿದ್ದು, ಇದನ್ನು ಬಲಪಡಿಸುವಲ್ಲಿ ಲೆಕ್ಕಪರಿಶೋಧಕರು ವಹಿಸಿದ ಪಾತ್ರವನ್ನು ಸ್ಮರಿಸಲಾಗುತ್ತದೆ. ಮಂಗಳೂರು ಯಾತ್ರೆಯ 66ನೇ ನಗರವಾಗಿದೆ ಎಂದರು.
ಜಿಲ್ಲೆಯ ಪ್ರಮುಖ ವ್ಯಾಪಾರ ಸಂಸ್ಥೆಗಳಾದ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಕೆನರಾ ಕೈಗಾರಿಕೆಗಳ ಸಂಘ, ಭಾರತೀಯ ಕೈಗಾರಿಕೆಗಳ ಒಕ್ಕೂಟದ ಜಿಲ್ಲಾ ಶಾಖೆ ಮತ್ತು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಸಾಯಂಕಾಲ 3.30ಕ್ಕೆ ಯೆಯ್ಯೆಡಿ ಕೈಗಾರಿಕಾ ಪ್ರದೇಶದಲ್ಲಿ ಮತ್ತು 5 ಗಂಟೆಗೆ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಯೆಯ್ಯೆಡಿಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬೈಕಂಪಾಡಿಯಲ್ಲಿ ಎಂಎಸ್‌ಎಂಇ ಡಿಎಇ ಜಂಟಿ ನಿರ್ದೇಶಕ ದೇವರಾಜ್ ಕೆ. ಮತ್ತು ಬೆಂಗಳೂರಿನ ಲೆಕ್ಕಪರಿಶೋಧಕ ವಿಶ್ರಾಂತ್ ಬಿ.ಎಲ್ ಭಾಗವಹಿಸಲಿದ್ದಾರೆ ಎಂದರು.
ಕೆಸಿಸಿಐ ಅಧ್ಯಕ್ಷ ಗಣೇಶ್ ಕಾಮತ್ ಎಂ., ಕೆಐಎ ಕಾರ್ಯದರ್ಶಿ ಆತ್ಮಿಕಾ ಅಮೀನ್, ಸಿಐಐ ಮಂಗಳೂರು ಅಧ್ಯಕ್ಷ ಗೌರವ್ ಹೆಗ್ಡೆ, ಐಸಿಎಐ ಮಂಗಳೂರು ಉಪಾಧ್ಯಕ್ಷ ಗೌತಮ್ ನಾಯಕ್ ಉಪಸ್ಥಿತರಿದ್ದರು.