ಭಾವೋದ್ವೇಗಕ್ಕೊಳಗಾಗಿ ಮಾತನಾಡುವುದರಲ್ಲಿ ಅರ್ಥವಿಲ್ಲ: ರೇಣುಕಾಚಾರ್ಯ ಹೇಳಿಕೆಗೆ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ
ಚಂದ್ರಶೇಖರ್ ಸಾವು ಪ್ರಕರಣ
ಬೆಂಗಳೂರು, ನ.7: ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸೋದರನ ಪುತ್ರನ ಸಾವು ಪ್ರಕರಣ ಸಂಬಂಧ ಪೊಲೀಸರು ನಿಷ್ಪಕ್ಷವಾಗಿ ಎಲ್ಲ ಆಯಾಮಗಳಿಂದಲೂ ತನಿಖೆ ಮಾಡುತ್ತಿದ್ದಾರೆ. ಆದರೆ, ಪೊಲೀಸರ ಮೇಲೆ ಅನುಮಾನ ವ್ಯಕ್ತಪಡಿಸುವುದು ಬೇಡ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಭಾವೋದ್ವೇಗಕ್ಕೊಳಗಾಗಿ ಮಾತನಾಡುವುದರಲ್ಲಿ ಅರ್ಥವಿಲ್ಲ. ತನಿಖಾ ವರದಿ ಬರುವವರೆಗೂ ತಾಳ್ಮೆಯಿಂದ ಇರಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಖುದ್ದು ನಾನೇ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೆಂದು ಪೊಲೀಸರಿಗೆ ಸೂಚನೆ ಕೊಟ್ಟಿದ್ದೇವೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದೆ'' ಎಂದರು.
ಇದನ್ನೂ ಓದಿ: ಚಂದ್ರು ಸಾವಿನ ಪ್ರಕರಣದಲ್ಲಿ ನಮ್ಮ ಪ್ರಶ್ನೆಗಳಿಗೆ ಪೊಲೀಸರಿಂದ ಉತ್ತರವೇ ಇಲ್ಲ: ಶಾಸಕ ರೇಣುಕಾಚಾರ್ಯ
ಮಾಗಡಿ ಬಂಡೆ ಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ''ಸ್ವಾಮೀಜಿಯವರ ಡೆತ್ನೋಟ್ನಲ್ಲಿ ಪ್ರಭಾವಿಗಳ ಹೆಸರು ಉಲ್ಲೇಖವಾಗಿರುವುದರಿಂದ ಎಲ್ಲ ರೀತಿಯಿಂದಲೂ ಪ್ರಕರಣವನ್ನು ಆಳವಾಗಿ ತನಿಖೆ ನಡೆಸಲಾಗುತ್ತಿದೆ'' ಎಂದು ಮಾಹಿತಿ ನೀಡಿದರು.