ತುರ್ತು ಚಿಕಿತ್ಸೆಗೆ ದಾಖಲೆ ಕಡ್ಡಾಯವಲ್ಲ: ಆದೇಶ

ಬೆಂಗಳೂರು, ನ. 7: ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ಸರಕಾರಿ ಆಸ್ವತ್ರೆಗೆ ಬರುವ ರೋಗಿಯನ್ನು ಯಾವುದೇ ದಾಖಲೆಗಳು ಇಲ್ಲದೆಯೇ ಮೊದಲು ಚಿಕಿತ್ಸೆಯನ್ನು ನೀಡಬೇಕು ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ತುಮಕೂರಿನಲ್ಲಿ ತಾಯಿ ಮತ್ತು ಮಕ್ಕಳು ಮೃತಪಟ್ಟ ಘಟನೆಯ ಬಳಿಕ ರಾಜ್ಯ ಸರಕಾರವು ಎಚ್ಚೆತ್ತುಕೊಂಡಿದೆ. ತುರ್ತು ಪರಿಸ್ಥಿತಿಯಲ್ಲಿ ರೋಗಿಗೆ ಚಿಕಿತ್ಸೆಯು ಅವಶ್ಯಕತೆಯಿದ್ದು, ವೈದ್ಯರು, ಶುಶ್ರೂಷಕರು ಮತ್ತು ಇತರ ಸಿಬ್ಬಂದಿಗಳು ಈ ಬಗ್ಗೆ ಕ್ರಮ ವಹಿಸಬೇಕು. ಆರೋಗ್ಯ ಸೇವೆಯನ್ನು ನೀಡುವಾಗ ರೋಗಿಯ ರಾಷ್ಟ್ರೀಯತೆ, ಜಾತಿ, ವರ್ಗ, ಆರ್ಥಿಕ ಸ್ಥಿತಿಯನ್ನು ಅವಲಂಭಿಸಬಾರದು ಎಂದು ಆದೇಶಿಸಿದೆ.
ರೋಗಿಯು ತಾಯಿ ಕಾರ್ಡ್, ಆಧಾರ್ ಕಾರ್ಡ್, ಪಡಿತರ ಚೀಟಿ ಇಲ್ಲದೇ ಇದ್ದರೂ ಅವಶ್ಯಕ ಚಿಕಿತ್ಸೆಯನ್ನು ನೀಡಬೇಕು. ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆಯನ್ನು ನೀಡಲು ದಾಖಲೆಯನ್ನು ನೀಡುವಂತೆ ಒತ್ತಾಯಿಸಬಾರದು. ಒಂದು ವೇಳೆ ದಾಖಲೆಗಳನ್ನು ಹಾಜರು ಪಡಿಸುವಂತೆ ಒತ್ತಾಯಿಸಿ, ಅಹಿತಕರ ಘಟನೆ ನಡೆದರೆ, ಅಧಿಕಾರಿ ಸೇರಿ ನೌಕರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗುವುದು ಎಂದು ತಿಳಿಸಿದೆ.