ಕಟ್ಟುನಿಟ್ಟಿನ ನಿರ್ಬಂಧಗಳ ಹೊರತಾಗಿಯೂ ಚೀನಾದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ

ಬೀಜಿಂಗ್, ನ.7: ಚೀನಾದಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳ ಹೊರತಾಗಿಯೂ ಕೋವಿಡ್(Covid) ಸೋಂಕು ಪ್ರಕರಣ ಕಳೆದ 6 ತಿಂಗಳಲ್ಲೇ ಗರಿಷ್ಟ ಮಟ್ಟವನ್ನು ತಲುಪಿದ್ದು ರವಿವಾರ 4,420 ಸ್ಥಳೀಯವಾಗಿ ಹರಡುವ ಸೋಂಕು ಪ್ರಕರಣ ವರದಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಕ್ಷಿಣದ ಗ್ವಾಂಗ್ಝೋ (Guangzhou in the south)ನಗರದಲ್ಲಿ 66 ಹೊಸ ಸ್ಥಳೀಯವಾಗಿ ಹರಡುವ ರೋಗಲಕ್ಷಣಗಳು, 1,259 ಲಕ್ಷಣ ರಹಿತ ಪ್ರಕರಣಗಳು ವರದಿಯಾಗಿದ್ದರೆ ಬೀಜಿಂಗ್ ನಲ್ಲಿ 43 ರೋಗ ಲಕ್ಷಣ ಮತ್ತು 6 ಲಕ್ಷಣ ರಹಿತ ಪ್ರಕರಣ ವರದಿ ಯಾಗಿವೆ. ಇದು ಮೇ 6 ರ ಬಳಿಕ ದ ಅತ್ಯಧಿಕ ಸೋಂಕು ಪ್ರಕರಣಗಳಾಗಿವೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ವಿಶ್ವದ ಇತರ ದೇಶಗಳು ಕೋವಿಡ್ ಸೋಂಕಿನ ಜತೆಗೇ ಸಾಗುವ ನಿರ್ಧಾರ ಪ್ರಕಟಿಸಿದ್ದರೂ ಚೀನಾ ಮಾತ್ರ ಶೂನ್ಯ ಕೋವಿಡ್ ನೀತಿಗೆ ದೃಢವಾಗಿ ಅಂಟಿಕೊಂಡಿದ್ದು ಆಗಿಂದಾಗ್ಗೆ ಲಾಕ್ಡೌನ್, ಕ್ವಾರಂಟೈನ್, ನಿರಂತರ ಪರೀಕ್ಷೆ ಮುಂತಾದ ಕಟ್ಟುನಿಟ್ಟಿನ ಕ್ರಮಗಳು ವ್ಯಾಪಾರ, ಉದ್ದಿಮೆ ಕ್ಷೇತ್ರಕ್ಕೆ ಹೊಡೆತ ನೀಡಿದೆ.
ಈ ಮಧ್ಯೆ. ಚೀನಾದ ಕೋವಿಡ್ ವಿರೋಧಿ ಕ್ರಮಗಳು ಸಂಪೂರ್ಣ ಸರಿಯಾಗಿವೆ, ಜತೆಗೆ ಅತ್ಯಂತ ಮಿತವ್ಯಯಕಾರಿ ಮತ್ತು ಪರಿಣಾಮಕಾರಿಯಾಗಿದೆ. ನಾವು ಜನರು ಮತ್ತು ಬದುಕು ಮೊದಲು ಎಂಬ ನಿಯಮಕ್ಕೆ ಬದ್ಧರಾಗಿರಬೇಕು ಮತ್ತು ಆಮದುಗಳನ್ನು ತಡೆಗಟ್ಟುವ ವಿಶಾಲ ಕಾರ್ಯತಂತ್ರಗಳನ್ನು ಅನುಸರಿಸಬೇಕಿದೆ ಎಂದು ಚೀನಾದ ರೋಗ ನಿಯಂತ್ರಣ ಅಧಿಕಾರಿ ಹು ಕ್ಸಿಯಾಂಗ್ ಹೇಳಿದ್ದಾರೆ.