ಮುರುಘಾ ಶ್ರೀ ಪ್ರಕರಣ | ಇದು ಎರಡೂವರೆ ದಶಕಗಳ ಸರಣಿ ಅತ್ಯಾಚಾರಗಳ ಪ್ರಕರಣ: ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಆರೋಪ

ಮೈಸೂರು,ನ.7: 'ಮುರುಘಾ ಮಠದ ಶ್ರೀಗಳ ಲೈಂಗಿಕ ಆರೋಪಕ್ಕೆ ಸಂಬಂಧಪಟ್ಟಂತೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿರುವುದು ಸ್ವಾಗತಾರ್ಹ. ಆದರೆ ಇಷ್ಟಕ್ಕೆ ಸುಮ್ಮನಾಗದೆ ಮತ್ತಷ್ಟು ಉತ್ತ ಮಟ್ಟದ ತನಿಖೆ ಮಾಡಿ ಮಠದಲ್ಲಿ ಭೂಗತವಾಗಿರುವ ಸತ್ಯವನ್ನು ಹೊರತರುವ ಕೆಲಸವನ್ನು ಮಾಡಬೇಕಿದೆ' ಎಂದು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಒತ್ತಾಯಿಸಿದ್ದಾರೆ.
ಒಡನಾಡಿ ಸಂಸ್ಥೆಯ ಆವರಣದಲ್ಲಿ ಸೋಮವಾರ ವಾರ್ತಾಭಾರತಿ ಯೊಂದಿಗೆ ಮಾತನಾಡಿದ ಅವರು, 'ಮುರುಘಾ ಮಠದ ಶ್ರೀಗಳ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿರುವುದು ಒಳ್ಳೆಯದು. ಆದರೆ ಅದೇ ಎಲ್ಲ ಸರಿ ಎಂದು ಹೇಳಲು ಆಗುವುದಿಲ್ಲ. ಇದೊಂದು ಆರಂಭಿಕ ಹೆಜ್ಜೆ, ಮಠದಲ್ಲಿ ಇನ್ನೂ ಬಹಳ ದೂರ ಹೋಗಿ ತನಿಖೆ ಮಾಡಬೇಕಿದೆ. ಇದು ಇಬ್ಬರು ಅಥವಾ ನಾಲ್ವರು ಹೆಣ್ಣು ಮಕ್ಕಳಿಗೆ ಮಾತ್ರ ಸಂಬಂಧಿಸಿದ ಪ್ರಕರಣ ಆಲ್ಲ, ಎರಡು ವರ್ಷಗಳಿಂದ ಮಠದಲ್ಲಿ ಸರಣಿ ಅತ್ಯಾಚಾರವಾಗಿರುವ ಅಂಶ ತಿಳಿದು ಬಂದಿದೆ. ಜೊತೆಗೆ ಅತ್ಯಾಚಾರ ಅಲ್ಲದೆ ಬೇರೆ ಬೇರೆ ಪ್ರಕರಣಗಳು ತಳುಕು ಹಾಕಿಕೊಂಡಿರುವುದು ಇದೆ. ಹಾಗಾಗಿ ಮತ್ತಷ್ಟು ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶವನ್ನು ಹೊರತರಬೇಕಿದೆ' ಎಂದರು.
'ಮಠದಲ್ಲಿ ಮಾದಕ ವಸ್ತುಗಳ ಬಳಕೆಯಾಗಿದೆ. ಮಕ್ಕಳಿಗೆ ಮಾದಕವಸ್ತುಗಳನ್ನು ಉಣಬಡಿಸಲಾಗಿದೆ. ಅದನ್ನು ಸೇವಿಸಿದ ಮೇಲೆ ಮಕ್ಕಳು ತಮ್ಮ ಕಂಟ್ರೋಲ್‍ನಲ್ಲೇ ಇರಲು ಆಗುತ್ತಿರಲಿಲ್ಲ, ಸ್ವಾಮೀಜಿ ಕೋಣೆಯಲ್ಲಿ ಮಲಗಿ ಬೆಳಿಗ್ಗೆ ಎದ್ದು ನೋಡಿದಾಗ ಬಹಳ ಸಂಕಟ ಅನುಭವಿಸಿ ತಮ್ಮ ರೂಮಿಗೆ ಹೋಗುತ್ತಿದ್ದರು ಎಂಬುದನ್ನು ಮಕ್ಕಳೇ ನಮ್ಮ ಬಳಿ ಹೇಳಿದ್ದಾರೆ' ಎಂದು ತಿಳಿಸಿದರು.
'ಮಠದಲ್ಲಿ ಬಳಕೆಯಾದ ಮಾದಕ ವಸ್ತುಗಳೂ ಎಲ್ಲಿ ಹೋದವು ಎಂಬುದರ ಬಗ್ಗೆಯೂ ತನಿಖೆಯಾಗಬೇಕಿದೆ. ಸ್ವಾಮೀಜಿ ಮಲಗುತ್ತಿದ್ದ ಕೋಣೆ, ಬಾತ್ ರೂಂ ಭೂಗರ್ಬದಲ್ಲೂ ಅಕ್ರಮ ಚಟುವಟಿಕೆಗಳು ನಡೆದಿವೆ ಎಂದು ತಿಳಿದು ಬಂದಿದೆ ಹಾಗಾಗಿ ಸಂಪೂರ್ಣ ತನಿಖೆ ಮಾಡಬೇಕಿದೆ' ಎಂದು ಹೇಳಿದರು.
''ತಮ್ಮ ಅಕ್ರಮ ಲಾಭಕ್ಕಾಗಿ ಸಂಘಟಿತ ಆರೋಪವನ್ನು ಮಾಡಲಾಗಿದೆ. ಕೆಲವರು ಮಕ್ಕಳನ್ನು ಸ್ವಾಮೀಜಿ ಬಳಿಗೆ ಕರೆದುಕೊಂಡು ಹೋಗಿ ಬಿಟ್ಟಿರುವ ಬಗ್ಗೆಯೂ ತಿಳಿದು ಬಂದಿದೆ. ಇದು ಅತ್ಯಾಚಾರ ಮಾಡುವುದಕ್ಕಿಂತ ದೊಡ್ಡ ಅಪರಾಧ, ಇದು ಬರಿ ಪೋಕ್ಸೊ ಪ್ರಕರಣ ಅಲ್ಲ, ಹಾಗಾಗಿ ಮಾನವ ಸಾಗಣೆ ಕೆಳಗೆ ಈ ಪ್ರಕರಣವನ್ನು ತರಬೇಕಿದೆ. ಮಕ್ಕಳ ಮೇಲೆ ಅತ್ಯಾಚಾರವಷ್ಟೇ ಅಲ್ಲದೆ. ಕೆಲವು ಮಹಿಳೆಯರನ್ನು ಅತ್ಯಾಚಾರ ಮಾಡಿ ನವಜಾತ ಶಿಶುಗಳನ್ನು ಬೇರೆಡೆ ಬಿಟ್ಟಿರುವ ಮಾಹಿತಿಯೂ ಇದೆ. ಬಹಳಷ್ಟು ಹೆಂಗಸರ ಗರ್ಭಚೀಲವನ್ನೇ ಕಿತ್ತು ಹಾಕಿದ್ದಾರೆ ಎಂಬ ಮಾಹಿತಿಯೂ ಇದೆ. ಹಾಗಾಗಿ ಬರಿ ಮೇಲ್ಪದರದ ತನಿಖೆ ಮಾಡಿ ಸುಮ್ಮನಾಗದೆ ಇದರ ಆಳಕ್ಕೆ ಇಳಿದು ತನಿಖೆ ಮಾಡಬೇಕಿದೆ. ಮಠದಲ್ಲಿರುವ ಎಲ್ಲಾ ಮಕ್ಕಳನ್ನು ಸ್ನೇಹ ಜೀವಿಯಾಗಿ ತನಿಖೆ ಮಾಡಿ ಹೇಳಿಕೆ ಪಡೆಯಬೇಕಿದೆ' ಎಂದು ಆಗ್ರಹಿಸಿದರು.
'ಐದನೇ ಆರೋಪಿ ಗಂಗಾಧರಯ್ಯ ಪಾತ್ರ ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ ಆತನ ಪಾತ್ರ ಇದೆ. ನವಜಾತ ಶಿಶುಗಳ ವಿಲೇವಾರಿಯಲ್ಲಿ ಈತನ ಪಾತ್ರ ಬಹಳಷ್ಟಿದೆ. ಕಾನೂನು ಚೌಕಟ್ಟಿನೊಳಗೆ ಹಣಕಾಸು ನೀಡಿ ಬಾಯಿ ಮುಚ್ಚಿಸುವ ಕೆಲಸವನ್ನು ಮಾಡುತ್ತಿದ್ದ. ಹಾಗಾಗಿ ಸಂಪೂರ್ಣ ತನಿಖೆ ಆಗಬೇಕು' ಎಂದು ಒತ್ತಾಯಿಸಿದರು.
'ಇದೊಂದು ಗಂಭೀರ ಪ್ರಕರಣ ವಾಗಿದ್ದು, ಇಡೀ ದೇಶಕ್ಕೆ ಗಮನ ಸೆಳೆದಿರುವ ಪ್ರಕರಣವಾಗಿದ್ದು, ಈಗಾಗಲೇ ಆರೋಪಿಗಳ ಮಂಪರು ಪರೀಕ್ಷೆಯನ್ನು ಮಾಡಬೇಕಿತ್ತು. ಮತ್ತಷ್ಟು ತನಿಖೆಯ ಸಾಧನಗಳನ್ನು ಬಳಸಬೇಕಿದೆ. ಸಾಕ್ಷಿಗಳು ಮತ್ತು ಸಂತ್ರಸ್ತರಿಗೆ ಸಮಗ್ರವಾದ ರಕ್ಷಣೆ ನೀಡಬೇಕು' ಎಂದು ಹೇಳಿದರು.







