ಗುಟ್ಕಾ ತಿನ್ನಿ, ಮದ್ಯ ಸೇವಿಸಿ ಆದರೆ ನೀರನ್ನು ಉಳಿಸಿ: ಬಿಜೆಪಿ ನಾಯಕನ ವಿಚಿತ್ರ ಹೇಳಿಕೆ !

ರೇವಾ: ʻʻಭೂಮಿ ಒಣಗುತ್ತಿದೆ, ನೀರನ್ನು ಉಳಿಸಬೇಕಿದೆ. ಗುಟ್ಕಾ ತಿನ್ನಿ, ಮದ್ಯ ಸೇವಿಸಿ, ಥಿನ್ನರ್, ಸುಲೇಸಾನ್ ಇದರ ಪರಿಮಳವನ್ನು ಹೀರಿ ಅಥವಾ ಐಡೆಕ್ಸ್ ಅನ್ನು ತಿನ್ನಿ, ಆದರೆ ನೀರಿನ ಮಹತ್ವವರನ್ನು ಅರಿಯಿರಿ,ʼʼ ಎಂಬ ವಿಚಿತ್ರ ಹೇಳಿಕೆಯನ್ನು ನೀಡಿದ್ದಾರೆ ಬಿಜೆಪಿಯ ರೇವಾ ಸಂಸದ ಜನಾರ್ದನ್ ಮಿಶ್ರಾ.
ರೇವಾದ ಕೃಷ್ಣರಾಜ್ ಕಪೂರ್ ಸಭಾಂಗಣದಲ್ಲಿ ರವಿವಾರ ನಡೆದ ಜಲಸಂರಕ್ಷಣಾ ಕಾರ್ಯಾಗಾರದಲ್ಲಿ ಅವರಾಡಿದ ಈ ಮಾತಿನ ವೀಡಿಯೋ ಕ್ಲಿಪ್ ವೈರಲ್ ಆಗಿದೆ.
ಮುಂದೆ ಮಾತನಾಡಿದ ಅವರು ʻʻಸರ್ಕಾರ ನೀರಿನ ತೆರಿಗೆಯನ್ನು ಮನ್ನಾಗೊಳಿಸುವುದಾಗಿ ಹೇಳಿದರೂ ತೆರಿಗೆ ಪಾವತಿಸುತ್ತೇವೆ ಬೇಕಿದ್ದರೆ ವಿದ್ಯುತ್ ಬಿಲ್ ಸಹಿತ ಇತರ ತೆರಿಗೆಗಳನ್ನು ಮನ್ನಾ ಮಾಡಿ ಎಂದು ಹೇಳಿ,ʼʼ ಎಂಬ ಸಲಹೆಯನ್ನೂ ನೀಡಿದ್ದಾರೆ.
ಮಿಶ್ರಾ ಅವರು ಈ ರೀತಿಯ ವಿಚಿತ್ರ ಕಾರಣಗಳಿಗಾಗಿ ಸುದ್ದಿಯಾಗುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಇತ್ತೀಚೆಗೆ ಅವರು ಶಾಲೆಯೊಂದರ ಶೌಚಾಲಯವನ್ನು ಬರಿಗೈಯ್ಯಲ್ಲಿ ಸ್ವಚ್ಛಗೊಳಿಸುತ್ತಿರುವ ವೀಡಿಯೋ ಕೂಡ ವೈರಲ್ ಆಗಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.





