ಚಿಕ್ಕಮಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಲ್ ಇನ್‍ಸ್ಪೆಕ್ಟರ್

ಚಿಕ್ಕಮಗಳೂರು, ನ.8: ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಸರ್ಕಲ್ ಇನ್‍ಸ್ಪೆಕ್ಟರ್ ಒಬ್ಬರು ಲೋಕಾಯುಕ್ತ ಸಂಸ್ಥೆಯ (Karnataka Lokayukta) ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ನರಸಿಂಹರಾಜಪುರ ಪಟ್ಟಣದಲ್ಲಿ ವರದಿಯಾಗಿದೆ.
ನರಸಿಂಹರಾಜಪುರ ಸರ್ಕಲ್ ಇನ್‍ಸ್ಪೆಕ್ಟರ್ ವಸಂತ್ ಶಂಕರ್ ಭಾಗವತ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಧಿಕಾರಿ ವಸಂತ್ ಶಂಕರ್ ಅವರು ಮುಸ್ತಫ್ ಅಲಿ ಎಂಬವರಿಗೆ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ಈ ಸಂಬಂಧ ಮುಸ್ತಫ್ ಅಲಿ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರೆನ್ನಲಾಗಿದೆ.
ದೂರಿನ ಮೇರೆಗೆ ಮಂಗಳವಾರ ನರಸಿಂಹರಾಜಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸರ್ಕಲ್ ಇನ್‍ಸ್ಪೆಕ್ಟರ್ ವಸಂತ್ ಶಂಕರ್ ಅವರು ಮುಸ್ತಫ್ ಅಲಿ ಅವರಿಂದ 10 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಸಂಸ್ಥೆಯ ಡಿವೈಎಸ್ಪಿ ದಾಳಿ ನಡೆಸಿದ್ದಾರೆ.
ಲಂಚದೊಂದಿಗೆ ಅಧಿಕಾರಿ ಸಿಕ್ಕಿ ಬಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.