ಸತೀಶ್ ಜಾರಕಿಹೊಳಿ ಹೇಳಿಕೆ; ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನೀತಿಯ ಅನಾವರಣ: ನಳಿನ್‍ಕುಮಾರ್ ಕಟೀಲ್
ಬೆಂಗಳೂರು, ನ.8: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಿಂದೂ ಎಂಬ ಪದ ಅಶ್ಲೀಲ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನೀತಿಯನ್ನು ಮತ್ತೆ ಅನಾವರಣಗೊಳಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಖಂಡಿಸಿದ್ದಾರೆ.
ಈ ರೀತಿಯಾಗಿ ಹಿಂದೂಗಳನ್ನು ಟೀಕಿಸುವ ಮಾನಸಿಕತೆಯನ್ನು ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಬೆಳೆಸಿಕೊಂಡು ಬಂದಿದೆ. ಹಿಂದೂಗಳನ್ನು ಅವಮಾನಿಸುವುದು, ಕಡೆಗಣಿಸುವುದನ್ನು ಕಾಂಗ್ರೆಸ್ ಪಕ್ಷವು ಸಾಮಾನ್ಯ ಕಾರ್ಯಸೂಚಿಯಾಗಿ ಪಾಲಿಸುತ್ತಲೇ ಬಂದಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
ಹಿಂದೂ ಎಂಬುದು ಭಾರತದ ಜೀವನ ಪದ್ಧತಿ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಸತೀಶ್ ಜಾರಕಿಹೊಳಿ ಅವರು ಹಾಗಿದ್ದರೆ ಸುಪ್ರೀಂ ಕೋರ್ಟಿಗಿಂತ ದೊಡ್ಡವರೇ ಎಂದು ಪ್ರಶ್ನಿಸಿದ್ದಾರೆ. ಅಂಬೇಡ್ಕರ್ ಅವರು ಹಿಂದೂ ಧರ್ಮದ ಬಗ್ಗೆ ಇದೊಂದು ಜೀವನ ಪದ್ಧತಿ ಎಂದು ಹಲವೆಡೆ ಉಲ್ಲೇಖಿಸಿದ್ದಾರೆ. ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಸತೀಶ್ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.