ರಾಣಿ ಅಬ್ಬಕ್ಕರಿಂದ ಎಲ್ಲ ಧರ್ಮದವರನ್ನು ಒಗ್ಗೂಡಿಸಿ ಹೋರಾಟ: ಡಾ.ಗಣನಾಥ ಎಕ್ಕಾರು

ಉಡುಪಿ: ಧರ್ಮಕೇಂದ್ರಿತವಾದ ಏಕಸ್ವಾಮ್ಯವನ್ನು ಒಡೆದು ಎಲ್ಲ ಜಾತಿ, ಧರ್ಮದವರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ರಾಣಿ ಅಬ್ಬಕ್ಕ ಹೋರಾಟ ನಡೆಸಿದ್ದರು. ಇದರಿಂದ ಹಲವಾರು ಬಾರಿ ಪೋರ್ಚುಗೀಸ್ ಸೈನಿಕರನ್ನು ಹಿಮ್ಮೆಟ್ಟಿಸಲು ಸಾಧ್ಯವಾಯಿತು. ಈ ಮೂಲಕ ಇಲ್ಲಿನ ಸಂಸ್ಕೃತಿಯ ಅನನ್ಯತೆ ಉಳಿಸುವ ಕೆಲಸವನ್ನು ಅಬ್ಬಕ್ಕ ಮಾಡಿದ್ದರು ಎಂದು ಜಾನಪದ ವಿದ್ವಾಂಸ ಡಾ. ಗಣನಾಥ ಶೆಟ್ಟಿ ಎಕ್ಕಾರು ಹೇಳಿದ್ದಾರೆ.
ಮಂಗಳೂರು ವಿವಿ ರಾಣಿ ಅಬ್ಬಕ್ಕ ಅಧ್ಯಯನ ಪೀಠ, ಅಜ್ಜರಕಾಡು ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಹಯೋಗದಲ್ಲಿ ಅಜ್ಜರಕಾಡು ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆದ ‘ಇತಿಹಾಸದ ಪುಟಗಳಲ್ಲಿ ರಾಣಿ ಅಬ್ಬಕ್ಕ ಸರಣಿ ಉಪನ್ಯಾಸ ಕಾರ್ಯ ಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಸ್ಥಳೀಯ ಭಾಷೆ, ಸಂಸ್ಕೃತಿ, ವಿಚಾರಗಳ ಬಗ್ಗೆ ತಿಳಿದುಕೊಂಡು ಮುಂದಿನ ತಲೆಮಾರಿಗೆ ತಿಳಿಸುವ ಕೆಲಸವಾಗ ಬೇಕು. ವ್ಯಕ್ತಿ ವಿಕಸನ ಆಗಲು ಆತ್ಮವಿಶ್ವಾಸ ಬೇಕು. ಹಾಗಾಗಲು ಅಬ್ಬಕ್ಕ, ಇಂದಿರಾಗಾಂಧಿ, ಕಮಲಾದೇವಿ ಚಟ್ಟೋಪಾ ಧ್ಯಾಯರಂತಹ ವ್ಯಕ್ತಿಗಳ ತತ್ವಾದರ್ಶಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಪುರುಷ ಕೇಂದ್ರಿತವಾದ ಯೋಚನೆಗಳನ್ನು ಮಹಿಳೆಯೂ ಮಾಡಬಹುದು ಎಂಬುವುದನ್ನು ಅಬ್ಬಕ್ಕ ತೋರಿಸಿಕೊಟ್ಟಿ ದ್ದಾರೆ. 15, 16ನೇ ಶತಮಾನದಲ್ಲಿ ಪೋರ್ಚುಗೀಸರನ್ನು ವಿರೋಧಿಸಲು ಶ್ರಮಿಸಿದವರಲ್ಲಿ ಅಬ್ಬಕ್ಕ ಕೂಡ ಒಬ್ಬರು. ಯುರೋಪಿಯನ್ನರ ವಿರುದ್ದ ಮೊದಲ ಬಾರಿಗೆ ಹೋರಾಟ ಮಾಡಿದವರು ರಾಣಿ ಅಬ್ಬಕ್ಕ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ಎಸ್. ವಹಿಸಿದ್ದರು. ಪ್ರೊ.ಸೌಜನ್, ಪ್ರೊ.ವಾಣಿ ಬಲ್ಲಾಳ್ ಉಪಸ್ಥಿತರಿದ್ದರು. ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಸಂಯೋಜಕ ಡಾ.ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ನಿಕೇತನಾ ವಂದಿಸಿದರು. ವಿದ್ಯಾರ್ಥಿನಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.







