ಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

ಕುಂದಾಪುರ : ರಿಕ್ಷಾದಲ್ಲಿ ಬಿಟ್ಟು ಹೋಗಿದ್ದ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಾರೀಸುದಾರರಿಗೆ ಮರಳಿಸುವ ಮೂಲಕ ರಿಕ್ಷಾ ಚಾಲಕ ರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಒಂಭತ್ತು ದಂಡಿಗೆಗೆ ನಿವಾಸಿ ಲಲಿತಾ ಕೆ. ಸೋಮವಾರ ಕುಂದಾಪುರ ಪೇಟೆಯಿಂದ ತನ್ನ ಮನೆಗೆ ಬಳ್ಕೂರು ಕಾರೇಕುದ್ರುವಿನ ರಿಕ್ಷಾ ಚಾಲಕ ಪ್ರಕಾಶ್ ನಾಯಕ್ ಎಂಬವರ ರಿಕ್ಷಾದಲ್ಲಿ ತೆರಳಿದ್ದರು. ರಿಕ್ಷಾ ಇಳಿಯುವ ವೇಳೆ ಸುಮಾರು 12 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣವನ್ನು ಮರೆತು ರಿಕ್ಷಾದಲ್ಲಿ ಬಿಟ್ಟು ಹೋಗಿದ್ದರು.
ಸುಮಾರು ತಾಸಿನ ಬಳಿಕ ರಿಕ್ಷಾದ ಸೀಟಿನ ಕೆಳಗೆ ಚಿನ್ನಾಭರಣ ಬಿದ್ದಿರುವುದನ್ನು ನೋಡಿದ ಚಾಲಕ, ಅದನ್ನು ಕುಂದಾಪುರ ಪೊಲೀಸ್ ಠಾಣೆಗೆ ಒಪ್ಪಿಸಿದರು. ಲಲಿತಾ ಅವರಿಗೆ ಚಿನ್ನ ಕಳೆದುಹೋಗಿರುವ ವಿಚಾರ ಗಮನಕ್ಕೆ ಬಂದಿದ್ದು, ದೂರು ಸಲ್ಲಿಸಲೆಂದು ಸಹೋದರನೊಂದಿಗೆ ಪೊಲೀಸ್ ಠಾಣೆಗೆ ಬಂದರು. ಪೊಲೀಸ್ ಉಪನಿರೀಕ್ಷಕ ಸದಾಶಿವ ಗವರೋಜಿ ರಿಕ್ಷಾ ಚಾಲಕನನ್ನು ಬರಹೇಳಿ ಅವರ ಉಪಸ್ಥಿತಿಯಲ್ಲಿ ಚಿನ್ನಾಭರಣವನ್ನು ಮಹಿಳೆಗೆ ಒಪ್ಪಿಸಿದರು. ಆಟೋ ಚಾಲಕ ಪ್ರಕಾಶ್ ಅವರ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.





