ಬೆಂಗಳೂರು | ಚಂದ್ರ ಗ್ರಹಣ; ಆಹಾರ ಸೇವಿಸಿ ಸಂಭ್ರಮಿಸಿದ ಚಿಂತಕರು..!

ಬೆಂಗಳೂರು, ನ. 8: ಇತ್ತೀಚಿಗೆ ಭವ್ಯವಾದ ಪಾಶ್ರ್ವ ಸೂರ್ಯ ಗ್ರಹಣ ಸಂಭವಿಸಿದ ಬೆನ್ನಲ್ಲೇ ಭಾಗಶಃ ಚಂದ್ರ ಗ್ರಹಣದ ಮತ್ತೊಂದು ಖಗೋಳ ಕೌತುಕವನ್ನು ಬೆಂಗಳೂರಿನ ಮಂದಿ ಕಣ್ತುಂಬಿಕೊಂಡಿದಲ್ಲದೆ, ಗ್ರಹಣದ ಸಂದರ್ಭದಲ್ಲೇ ಆಹಾರ ಸೇವಿಸಿ ಸಂಭ್ರಮಿಸಿದರು.
ಮಂಗಳವಾರ ಸೂರ್ಯ ಅಸ್ತಮಿಸುತ್ತಿದ್ದಂತೆ ಭೂಮಿಯ ನೆರಳಿನ ಒಂದು ಭಾಗದೊಂದಿಗೆ ಪೂರ್ಣ ಚಂದ್ರ ಪೂರ್ವ ದಿಗಂತದ ಬಳಿ ಸಂಜೆ ಸುಮಾರಿಗೆ ಕಾಣಿಸಿಕೊಂಡ ಸಂದರ್ಭದಲ್ಲಿ ಚಿಂತಕರು, ವಿಜ್ಞಾನಿಗಳು, ವಿದ್ಯಾರ್ಥಿಗಳು, ಹೋರಾಟಗಾರರು, ವಿಚಾರವಾದಿಗಳು ಆಹಾರ ಸೇವಿಸಿ ಮೌಢ್ಯಕ್ಕೆ ಸೆಡ್ಡು ಹೊಡೆದರು.
ಇಲ್ಲಿನ ಪುರಭವನ ಮುಂಭಾಗ ‘ಮೂಢನಂಬಿಕೆ ವಿರೋಧಿ ಒಕ್ಕೂಟ’ದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ‘ನಮ್ಮ ನಡೆ ವಿಜ್ಞಾನದೆಡೆ ಅಭಿಯಾನ’ದಲ್ಲಿ ನೂರಾರು ಜನರು ಪಾಲ್ಗೊಂಡು, ಚಂದ್ರ ಗ್ರಹಣ ಕುರಿತು ಹಬ್ಬಿರುವ ಮೂಢ ನಂಬಿಕೆಗಳ ವಿರುದ್ಧ ಧ್ವನಿಗೂಡಿದರು.
ಇದೇ ವೇಳೆ ಹಲವ ಬಗೆಯ ಹಣ್ಣು, ಸಮೋಸ, ಊಟ ಸೇರಿದಂತೆ ತಿಂಡಿ, ತಿನಿಸುಗಳನ್ನು ಪ್ರದರ್ಶನ ಮಾಡಿದ್ದಲ್ಲದೇ ಚಂದ್ರಗ್ರಹಣ ಸಮಯದಲ್ಲಿಯೇ ಅವುಗಳನ್ನು ತಿಂದು ಇದರಿಂದ ‘ಏನೂ ತೊಂದರೆಯಿಲ್ಲ’ ಎಂದು ಸಾಬೀತುಪಡಿಸಿದರು.
ಈ ವೇಳೆ ಮಾಜಿ ಸಚಿವೆ ಬಿ.ಟಿ.ಲಲತಾ ನಾಯ್ಕ್ ಮಾತನಾಡಿ, ‘ಮಾಧ್ಯಮಗಳು ಗ್ರಹಣ ಮತ್ತಿತರ ವಿಷಯಗಳನ್ನು ನೇರವಾಗಿ ಜನರಿಗೆ ತಲುಪಿಸುತ್ತಿರುವುದರಿಂದ ಜನತೆ ಜಾಗೃತಗೊಂಡಿದ್ದಾರೆ. ಮೊಬೈಲ್, ಇಂಟರ್ನೆಟ್ ಹಾಗೂ ಸಾಮಾಜಿಕ ಜಾಲತಾಣಗಳು ಅಂಗೈನಲ್ಲಿದ್ದು ಪರಿಣಾಮಕಾರಿಯಾಗಿ ಮಾಹಿತಿ ಒದಗಿಸುತ್ತಿರುವುದು ಜನರಿಗೆ ಅನುಕೂಲಕರ’ ಎಂದರು.
ವಿದ್ಯಾರ್ಥಿ ಯುವಜನರು ಹೆಚ್ಚೆಚ್ಚು ವೈಜ್ಞಾನಿಕವಾಗಿ ಆಲೋಚನೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಮಾನವನ ಅಭ್ಯುದಯಕ್ಕಾಗಿ ಸಮಾಜದಲ್ಲಿ ಪ್ರಗತಿಪರ ಮೌಲ್ಯಗಳನ್ನು ಬೆಳೆಸಬೇಕಾದುದು ಅತ್ಯಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಒಕ್ಕೂಟದ ಟಿ.ನರಸಿಂಹಮೂರ್ತಿ, ‘ಸೌರಮಂಡಲದ ಸಹಜ ವಿದ್ಯಮಾನದ ಗ್ರಹಣದ ಕುರಿತು ಜ್ಯೋತಿಷಿಗಳು ಹಾಗೂ ಸಂಪ್ರದಾಯವಾದಿಗಳು ಮುಗ್ಧ ಜನರಲ್ಲಿ ಅನಗತ್ಯ ಭಯವನ್ನು ಮೂಡಿಸುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಮೌಢ್ಯ ಹೆಚ್ಚುತ್ತಿದೆ. ಮುಗ್ಧ ಜನರ ಭಾವನೆಗಳೊಂದಿಗೆ ಚಲ್ಲಾಟವಾಡುವವರಿಗೆ ಕಡಿವಾಣ ಹಾಕಬೇಕಿದೆ’ ಎಂದು ನುಡಿದರು.
ಹೋರಾಟಗಾರ್ತಿ ರೇವತಿ ಮಾತನಾಡಿ, ‘ಗ್ರಹಣಗಳು ಮನುಷ್ಯನ ಮೇಲೆ ಯಾವುದೇ ರೀತಿಯ ಪರಿಣಾಮ ಬಿರೋದಿಲ್ಲ. ಆದರೆ ಕೆಲವು ಭಯೋತ್ಪಾದಕ ಜ್ಯೋತಿಷಿಗಳು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಇಂತಹ ಡೋಂಗಿ ಜ್ಯೋತಿಷಿಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೋರಾಟಗಾರರಾದ ಬಿ.ಗೋಪಾಲ್, ಪುರುಷೋತ್ತಮ್ ದಾಸ್, ಮಾವಳ್ಳಿ ವೆಂಕಟೇಶ್, ರಾಜಗೋಪಾಲ್, ನಾಗೇಶ್, ಬಸವರಾಜು, ವಿನಯ್ ಸೇರಿದಂತೆ ಪ್ರಮುಖರಿದ್ದರು.
‘ಚಂದ್ರ ಗ್ರಹಣದ ಸಮಯದಲ್ಲಿ ಮನೆಯಿಂದ ಹೊರ ಬರಬಾರದು, ಆಹಾರ ಸೇವಿಸಬಾರದು, ದಾನ ಕೊಡಬೇಕು ಎಂಬೆಲ್ಲ ನಿಯಮಗಳು ಅವೈಜ್ಞಾನಿಕ. ಈ ಮೂಢ ನಂಬಿಕೆಗಳಿಂದ ಜನರು ಹೊರಬರಬೇಕು’
-ಹುಲಿಕಲ್ ನಟರಾಜ್, ವಿಚಾರವಾದಿ







