ಬೆಂಗಳೂರು; ‘ವಿದ್ಯುತ್ ಕ್ಷೇತ್ರದ ಖಾಸಗಿಕರಣ’ದ ವಿರುದ್ಧ ರಾಜಿ ರಹಿತ ಹೋರಾಟಕ್ಕೆ ಕರೆ

ಬೆಂಗಳೂರು, ನ. 8: ‘ವಿದ್ಯುತ್ ಗುತ್ತಿಗೆ ನೌಕರರ ಖಾಯಮಾತಿ, ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಖಾಸಗಿಕರಣದ ನೀಲನಕ್ಷೆ ವಿದ್ಯುತ್ ತಿದ್ದುಪಡಿ ಮಸೂದೆ-2022ಅನ್ನು ಕೂಡಲೇ ಹಿಂಪಡೆಯಬೇಕು’ ಎಂದು ಕೆಪಿಟಿಸಿಎಲ್ ವಿದ್ಯುತ್ ವಿತರಣಾ ಗುತ್ತಿಗೆ ಕಾರ್ಮಿಕರ ಸಂಘ ಹಾಗೂ ರಾಜ್ಯ ವಿದ್ಯುತ್ ಸರಬರಾಜು ಕಂಪೆನಿಗಳ ಗುತ್ತಿಗೆ ನೌಕರರ ಸಂಘ ಆಗ್ರಹಿಸಿವೆ.
ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ ಸಮಾವೇಶದ ಉದ್ಘಾಟಿಸಿ ಮಾತನಾಡಿದ ಎಐಪಿಎಫ್‍ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಸಮರ್ ಸಿನ್ಹಾ, ‘ವಿದ್ಯುತ್ ವಲಯದ ಗುತ್ತಿಗೆ ಕಾರ್ಮಿಕರು ಶೋಷಣೆಗೆ ಒಳಗಾಗಿದ್ದು, ಈ ವಲಯವನ್ನು ಕನಿಷ್ಠ ವೇತನದ ನಿಗದಿತ ಕೈಗಾರಿಕಾ ಶೆಡ್ಯೂಲ್‍ನಲ್ಲಿ ಸೇರಿಸಲಾಗಿಲ್ಲ. ವಿದ್ಯುತ್ ಗುತ್ತಿಗೆ ಕಾರ್ಮಿಕರಿಗೆ ಕಟ್ಟಡ ಕಾರ್ಮಿಕರ ಕೂಲಿಯಷ್ಟನ್ನು ಪಾವತಿಸಲಾಗುತ್ತಿದೆ’ ಎಂದು ಹೇಳಿದರು.
ಕನಿಷ್ಟ ವೇತನವನ್ನು ನೀಡುತ್ತಿಲ್ಲ. ಕಾರ್ಮಿಕ ಕಾನೂನುಗಳ ಶಾಸನಬದ್ಧ ನಿಬಂಧನೆಗಳನ್ನು ಉಲ್ಲಂಘಿಸಿ ಶೋಷಣೆ ನಡೆಸಲು ಎಲ್ಲ ಪಕ್ಷಗಳ ಸರಕಾರಗಳೂ ಹಿಂದೆ ಬಿದ್ದಿಲ್ಲ. ಈ ಸ್ಥಿತಿಯಲ್ಲಿ ಕಾರ್ಮಿಕರು ಕಷ್ಟಪಟ್ಟು ಗಳಿಸಿದ ಹಕ್ಕುಗಳನ್ನು ರಕ್ಷಿಸಲು ಸರಿಯಾದ ನಾಯಕತ್ವದಲ್ಲಿ ರಾಜಿ ರಹಿತ ಚಳುವಳಿಯನ್ನು ಕಟ್ಟಬೇಕು ಎಂದು ಅವರು ಇದೇ ಸಂದರ್ಭದಲ್ಲಿ
ಕರೆ ನೀಡಿದರು.
ಅಧ್ಯಕ್ಷ ಕೆ.ಸೋಮಶೇಖರ್ ಮಾತನಾಡಿ, ವಿದ್ಯುತ್ ವಲಯದಲ್ಲಿ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರಾಗಿ ದುಡಿಯುತ್ತಿರುವ ಕಾರ್ಮಿಕರ ವೇತನ ಪರಿಷ್ಕರಣೆ, ಭಡ್ತಿ, ಬೋನಸ್, ಗ್ರಾಚ್ಯುಟಿ ಹಾಗೂ ಸಂಘ ಕಟ್ಟಿಕೊಳ್ಳುವ ಹಕ್ಕನ್ನೂ ಬಿಡದೆ ಎಲ್ಲಾ ಹಕ್ಕುಗಳನ್ನು ದಮನ ಮಾಡುತ್ತಿರುವುದು ಖಂಡನೀಯ. ಈ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಖಾತ್ರಿ ಮಾಡಬೇಕು ಎಂದು ಕೋರಿದರು.
ನೌಕರರ ಸಂಘದ ಮುಖಂಡ ಮುಹಮ್ಮದ್ ಸಲೀಮ್ ಉಲ್ಲಾ, ವಕೀಲ ವಿ.ಎಸ್.ನಾಯಕ್, ಮುಖಂಡರಾದ ತಿರುಮಲರಾವ್, ಎನ್.ಎಸ್.ವೀರೇಶ್, ಮಂಜುನಾಥ್ ಕೈದಾಳ್, ಎಸ್.ಎಂ.ಶರ್ಮಾ, ಗಂಗಾಧರ ಬಡಿಗೇರ, ಶಿವರಾಜ್, ಉಮೇಶ, ಲೋಕೇಶ ಉಪಸ್ಥಿತರಿದ್ದರು.







