ಬೆಳ್ತಂಗಡಿ: ಶ್ರೀ ಗುರುದೇವ ಕಾಲೇಜಿನ ಮೂವರು ವಿದ್ಯಾರ್ಥಿಗಳು ಲಂಡನ್‍ನಲ್ಲಿ ನಡೆಯುವ ಕರಾಟೆ ಜಾಗತಿಕ ಪಂದ್ಯಗಳಿಗೆ ಆಯ್ಕೆ

ಬೆಳ್ತಂಗಡಿ : ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ಲಂಡನ್‍ನಲ್ಲಿ ನಡೆಯುವ ಕರಾಟೆ ಜಾಗತಿಕ ಪಂದ್ಯಗಳಿಗೆ ಆಯ್ಕೆಯಾಗಿದ್ದು, ಈ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಕಾಲೇಜು ಆವರಣದಲ್ಲಿ ಮಂಗಳವಾರ ನಡೆಯಿತು.
ಈ ಸಂದರ್ಭ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸಂಸ್ಥೆಯ ಅಧ್ಯಕ್ಷ, ಮಾಜಿ ಶಾಸಕ ಕೆ. ವಸಂತ ಬಂಗೇರ ಮಾತನಾಡಿ, ‘ ಕಾಲೇಜಿನ ಇತಿಹಾಸದಲ್ಲಿ ಇದು ಅವಿಸ್ಮರಣೀಯ ಕ್ಷಣವಾಗಿದೆ. ಲಂಡನ್‍ಗೆ ಕಳುಹಿಸಿಕೊಡಲು ಎಷ್ಟೇ ಖರ್ಚಾದರೂ ಅದನ್ನು ಹೊಂದಿಸಿಕೊಂಡು ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು. ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕವಾಗಿ ಬೆಳೆಯಲು ಸದಾ ಪ್ರೋತ್ಸಾಹವನ್ನು ನೀಡಲಾಗುವುದು. ಅವಕಾಶ ಸಿಕ್ಕ ಸಂದರ್ಭದಲ್ಲಿ ಅದನ್ನು ಬಳಸಿಕೊಳ್ಳುವ ಗುಣ ವಿದ್ಯಾರ್ಥಿಗಳಲ್ಲಿ ಸದಾ ಇರಬೇಕು’ ಎಂದರು.
ಗೋವಾದ ಪಣಜಿಯಲ್ಲಿ ನಡೆದ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿಗಳಾದ ಯುವರಾಜ್ ಕುಮಿಟೆ ಮತ್ತು ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ, ಶಾಹಿರ್ ಅನಾಝ್ ಕುಮಿಟೆಯಲ್ಲಿ ಪ್ರಥಮ ಸ್ಥಾನ, ಕಟಾದಲ್ಲಿ ದ್ವಿತೀಯ ಸ್ಥಾನ, ಪ್ರಥಮ ವಾಣಿಜ್ಯ ಬಿ ವಿಭಾಗದ ಶೇಕ್ ಕಲ್ಪಾನ್ ಹುಸೈನ್ ಕುಮಿಟೆಯಲ್ಲಿ ಪ್ರಥಮ ಸ್ಥಾನ, ಕಟಾದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡು ಮಾರ್ಚ್ ತಿಂಗಳಲ್ಲಿ ಲಂಡನ್‍ನಲ್ಲಿ ನಡೆಯುವ ಕರಾಟೆ ಜಾಗತಿಕ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಮೂವರು ವಿದ್ಯಾರ್ಥಿಗಳನ್ನು ಗುರುವಾಯನಕೆರೆಯಿಂದ ಬೆಳ್ತಂಗಡಿಯಲ್ಲಿರುವ ಗುರುದೇವ ಕಾಲೇಜು ಆವರಣದೊಳಗೆ ಚೆಂಡೆ, ಕೊಂಬು ವಾದನದೊಂದಿಗೆ ಬೃಹತ್ ಮೆರವಣಿಗೆಯಲ್ಲಿ ಕರೆ ತಂದು ಅಭಿನಂದಿಸಲಾಯಿತು.
ಈ ಸಂದರ್ಭ ಕಾಲೇಜಿನ ಕ್ರೀಡಾ ತರಬೇತುದಾರ ಶೇಖ್ ರಶೀದ್, ಪದವಿ ಮತ್ತು ಪದವಿಪೂರ್ವ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ ಪ್ರಸ್ತಾವಿಸಿದರು. ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಶಮೀವುಲ್ಲಾ ಸ್ವಾಗತಿಸಿದರು. ಉಪನ್ಯಾಸಕ ರಾಕೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ವಂದಿಸಿದರು.
.jpeg)