ಬೇಡಿಕೆ ಈಡೇರಿಸದ ಆರೋಪ; ಶಿವಮೊಗ್ಗ ಡಿಸಿ ಕಚೇರಿ ಎದುರು ಬೈಕಿಗೆ ಬೆಂಕಿ ಹಚ್ಚಿ ಯುವಕನ ಆಕ್ರೋಶ
ಶಿವಮೊಗ್ಗ, ನ.8: ಜಿಲ್ಲಾಡಳಿತ ತನ್ನ ಬೇಡಿಕೆ ಈಡೇರಿಸಲಿಲ್ಲ ಎಂದು ಆರೋಪಿಸಿ ಯುವಕನೊಬ್ಬ ತನ್ನ ಬೈಕಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ವರದಿಯಾಗಿದೆ.
ಗಾಡಿಕೊಪ್ಪ ಸಮೀಪದ ಡಾ.ಅಂಬೇಡ್ಕರ್ ನಗರದ ರಾಜು (29) ಎಂಬವರೇ ಬೈಕ್‌ಗೆ ಬೆಂಕಿ ಹಚ್ಚಿದ ಯುವಕ ಎಂದು ತಿಳಿದು ಬಂದಿದೆ.
ಸೋಮವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಾಜು, ತನ್ನ ಬೈಕಿಗೆ ಬೆಂಕಿ ಹಚ್ಚಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಕೆಲವೇ ಕ್ಷಣದಲ್ಲಿ ಬೈಕು ಹೊತ್ತಿ ಉರಿದಿದೆ.
ಇದನ್ನು ಗಮನಿಸಿದ ಅಧಿಕಾರಿಗಳು, ಕೂಡಲೆ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.
ಘಟನೆಗೆ ಕಾರಣ: ಡಾ. ಅಂಬೇಡ್ಕರ್ ಕಾಲೋನಿಯ ನಿವಾಸಿಗಳು ತುಂಗಾ ಏತ ನೀರಾವರಿ ಯೋಜನೆ ಜಾಗ ಒತ್ತುವರಿ ಮಾಡಿ ಮನೆ ಕಟ್ಟಿಕೊಂಡಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಅದನ್ನು ತೆರವುಗೊಳಿಸಲಾಗಿತ್ತು. ಈ ಸಂದರ್ಭ ನಿವಾಸಿಗಳು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.
ಆ ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ಮಾಡಿದ್ದರು. ಆದರೆ ಈತನಕ ತಮಗೆ ನ್ಯಾಯ ಸಿಕ್ಕಿಲ್ಲ ಎಂದು ರಾಜು ಆಕ್ರೋಶಗೊಂಡಿದ್ದ, ಪ್ಲಾಸ್ಟಿಕ್ ಹೂವುಗಳನ್ನು ಮಾರಾಟ ಮಾಡುವ ಉದ್ಯೋಗ ಮಾಡುತ್ತಿದ್ದ ರಾಜು ತಮಗೆ ಯಾರೂ ನ್ಯಾಯ ಒದಗಿಸುತ್ತಿಲ್ಲ ಎಂದು ಬೇಸಗೊಂಡು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಜಯನಗರ ಠಾಣೆ ಪೊಲೀಸರು ರಾಜುನನ್ನು ವಶಕ್ಕೆ ಪಡೆದಿದ್ದಾರೆ.