ಚಂದ್ರಶೇಖರ್ ಸಾವು ಪ್ರಕರಣ | ಸಂಪೂರ್ಣ ತನಿಖೆಯಾಗುವವರೆಗೆ ಅಂತಿಮ ತೀರ್ಮಾನಕ್ಕೆ ಬರಬೇಡಿ: ಪೊಲೀಸರಿಗೆ ಸಿಎಂ ಸೂಚನೆ
ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ನೀಡಿ, ಸಾಂತ್ವನ ಹೇಳಿದ ಬೊಮ್ಮಾಯಿ
ದಾವಣಗೆರೆ, ನ. 09: ''ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಕುರಿತು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದು, ಸಂಪೂರ್ಣ ತನಿಖೆಯಾಗುವವರೆಗೂ, ಕಾರಣ ನಿಖರವಾಗಿ ಪತ್ತೆಯಾಗುವವರೆಗೆ ಯಾವುದೇ ತೀರ್ಮಾನಕ್ಕೆ ಬರುವುದು ಬೇಡ'' ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ರೇಣುಕಾ ಚಾರ್ಯ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
''ಅವರ ಕುಟುಂಬದ ಸದಸ್ಯರು ಹಾಗೂ ನಮ್ಮೆಲ್ಲರಿಗೂ ಚಂದ್ರು ಸಾವು ಕಾಡುತ್ತಿದೆ. ಇಲ್ಲಿಗೆ ನಾನು ಮುಖ್ಯಮಂತ್ರಿಯಾಗಿ ಬಂದಿಲ್ಲ. ನಾನೊಬ್ಬ ಸಹೋದರನಾಗಿ ಬಂದಿದ್ದೇನೆ'' ಎಂದರು.
ಹಲವು ಆಯಾಮಗಳು: ''ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಎರಡು ರೀತಿಯ ಸಾಧ್ಯಾಸಾಧ್ಯತೆಗಳಿವೆ. ಚಂದ್ರು ಹಿನ್ನೆಲೆ ಗಮನಿಸಿದರೆ ಕೊಲೆಯಾಗಿರುವ ಸಂಭವವಿರಬಹುದು ಎಂಬ ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ. ಕಾರಿನ ಸ್ಥಿತಿ ನೋಡಿದರೆ ಅಪಘಾತವಾಗಿರಬಹುದುದೆಂಬ ಸಾಧ್ಯತೆಯೂ ಇದೆ. ಯಾವುದನ್ನೂ ನಾವು ತೆಗೆದುಹಾಕುವಂತಿಲ್ಲ. ಎರಡೂ ಆಯಾಮದಲ್ಲಿ ತನಿಖೆ ಮಾಡಲು ಸೂಚಿಸಲಾಗಿದೆ'' ಎಂದರು.
''ಸಾಕ್ಷ್ಯಾಧಾರಗಳು ಬಹಳ ಮುಖ್ಯ. ಚಂದ್ರು ಹಿಂದಿನ ಸೀಟಿಗೆ ಯಾಕೆ ಬಂದ ಎನ್ನುವ ಪ್ರಶ್ನೆಯಿದೆ. ಅವನ ತಲೆಯಲ್ಲಿ ಕೂದಲು ಹೋಗಿರುವುದು, ಕಾರಿನ ಮುಂದಿನ ಗಾಜು ಒಡೆದಿದೆ, ಹಿಂದಿನ ಗಾಜಿಗೆ ಏನೂ ಆಗದಿರುವುದು ಎನ್ನುವುದು ಮೇಲ್ನೋಟಕ್ಕೆ ಸಾಮಾನ್ಯರಿಗೆ ಕಾಡುವ ಪ್ರಶ್ನೆಗಳು. ಆದರೆ ತನಿಖಾಧಿಕಾರಿಗಳು ಮರಣೋತ್ತರ ಪರೀಕ್ಷೆ ವರದಿ ಬರಬೇಕು. ಅದಕ್ಕೆ ಬೆಂಬಲವಾಗಿ ಎಫ್. ಎಸ್.ಎಲ್ ವರದಿಯೂ ಮುಖ್ಯ. ಅಲ್ಲಿನ ಪದಾರ್ಥಗಳನ್ನು ಆಯ್ಕೆ ಮಾಡಿ ತನಿಖೆ ಮಾಡುತ್ತಾರೆ. ದೇಹದ ನೀರು, ಕಾಲುವೆ ನೀರು ಇವುಗಳ ವರದಿ ಅಗತ್ಯ. ಅಪರಾಧ ಹೇಗಾಗಿರಬಹುದೆಂಬ ಮರುಸೃಷ್ಟಿ ಮಾಡಿ ಪರಿಣಿತರು ನೋಡುತ್ತಾರೆ. ಈ ಮೂರು ತನಿಖೆ ಆದ ನಂತರ ಮುಂದಿನ ತನಿಖೆಯ ಕೈಗೊಳ್ಳಲಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಪ್ರತ್ಯೇಕ ತನಿಖಾ ತಂಡದ ಅಗತ್ಯತೆಯ ಬಗ್ಗೆ ತೀರ್ಮಾನಿಸಲಾಗುವುದು'' ಎಂದರು.