ಕಾನೂನು ಪಾಲನೆ ಆದ್ಯತೆಯಾದಾಗ ಅಕ್ರಮಕ್ಕೆ ಕಡಿವಾಣ: ಎಸಿಪಿ ಮಹೇಶ್ ಕುಮಾರ್

ಮಂಗಳೂರು, ನ.9: ನಮ್ಮ ದೇಶದಲ್ಲಿ ಸಾಕಷ್ಟು ಕಾನೂನುಗಳು ಜಾರಿಯಲ್ಲಿವೆ. ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳಲು ಆಗುತ್ತಿಲ್ಲ. ಕಾನೂನು ಪಾಲನೆ ಆದ್ಯತೆಯಾದಾಗ ಮಾತ್ರ ಮಾನವ ಕಳ್ಳ ಸಾಗಾಟದಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದು ಮಂಗಳೂರ ಉತ್ತರ ಉಪ ವಿಭಾಗದ ಪೊಲೀಸ್ ಸಹಾಯಕ ಆಯುಕ್ತ ಮಹೇಶ್ ಕುಮಾರ್ ಅಭಿಪ್ರಾಯಿಸಿದ್ದಾರೆ.
ಅವರು ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಇಂದು ಮಾನವ ಕಳ್ಳ ಸಾಗಾಟ ವಿರೋಧಿ ಕ್ಲಬ್ ವತಿಯಿಂದ ಆಯೋಜಿಸಲಾದ ಮಾನವ ಕಳ್ಳ ಸಾಗಾಣಿಕೆ ವಿರೋಧಿ: ಕಾಳಜಿ ಹಾಗೂ ಕಾರ್ಯಯೋಜನೆ ಎಂಬ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಹೊಸ ಕಾನೂನು ಜಾರಿಗೆ ಬಂದಾಗ ಅದನ್ನು ಜಾರಿಗೆ ತರುವ ಅಥವಾ ಅಥವಾ ಅದಕ್ಕೆ ಆದ್ಯತೆ ನೀಡುವ ಬದಲಾಗಿ ಅದರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎನ್ನುವಂತಹ ಮನಸ್ಥಿತಿಯೇ ನಮ್ಮಲ್ಲಿ ಹೆಚ್ಚಾಗಿದೆ. ಕಾನೂನು ಪಾಲನೆಗೆ ಎಲ್ಲರೂ ಆದ್ಯತೆ ನೀಡಿದಾಗ ಮಾತ್ರವೇ ಅಕ್ರಮಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದವರು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಇಂಟರ್‌ನ್ಯಾಷನಲ್ ಜಸ್ಟಿಸ್ ಮಿಷನ್ ವಿಭಾಗ ಮುಖ್ಯಸ್ಥರಾದ ಪ್ರತಿಮಾ ಎಂ., ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯ ರೈ ಭಾಗವಹಿಸಿದ್ದರು.
ಜಯರಾಜ ಅಮೀನ್ ಸ್ವಾಗತಿಸಿದರು. ಡಾ.ಗಾಯತ್ರಿ ನಿರೂಪಿಸಿದರು. ಎಚ್.ಟಿ.ಸಿ. ಸದಸ್ಯ ಕಾರ್ಯದರ್ಶಿ ಡಾ.ನಾಗರತ್ನ ಕೆ.ಎ.ವಂದಿಸಿದರು.
