ಮಂಗಳೂರು ಅಂತಾರಾಷ್ಟ್ರೀಯ ವಿಮಾನ ಯಾನದಲ್ಲಿ ಹೆಚ್ಚಳ
ಕೋವಿಡ್ ಪೂರ್ವ ಸ್ಥಿತಿಯತ್ತ ಪ್ರಯಾಣಿಕರ ನಿರ್ವಹಣೆ

ಮಂಗಳೂರು, ನ. 9: ಕೆಂಜಾರಿನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಮೂಲಕ ಆಗಮಿಸುವ ಹಾಗೂ ನಿರ್ಗಮಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಪ್ರಯಾಣಿಕರ ನಿರ್ವಹಣೆ ಈಗ ಕೋವಿಡ್ ಪೂರ್ವ ಸ್ಥಿತಿಗೆ ಮರಳಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.
2019ರ ಏಪ್ರಿಲ್ 1ರಿಂದ ಅಕ್ಟೋಬರ್ 31ರ ಅವಧಿಯಲ್ಲಿ ಮಂಗಳೂರು ವಿಮಾನ ನಿಲ್ದಾಣವು 11,04,585 ಪ್ರಯಾಣಿಕರನ್ನು ನಿರ್ವಹಿಸಿದೆ. ಈ ಅವಧಿಯಲ್ಲಿ ಏರ್ ಟ್ರಾಫಿಕ್ ಸಂಚಾರ (ಎಟಿಎಂಗಳು) 8,985 ರಷ್ಟಿತ್ತು. 2022 ಏಪ್ರಿಲ್ 1 ರಿಂದ ಅಕ್ಟೋಬರ್ 31ರ ವರೆಗೆ 10,51,229 ಪ್ರಯಾಣಿಕರು ಮತ್ತು 8,561 ಎಟಿಎಂಗಳನ್ನು ನಿರ್ವಹಿಸಿದೆ. ಇದು ಶೇ.95.17 ಸಾಧನೆಯಾದರೆ, ಕೋವಿಡ್ ಪೂರ್ವ ಈ ಸಾಧನೆ ಶೇ.95.28ರಷ್ಟಿದ್ದು, ಅದರ ಸನಿಹಕ್ಕೆ ಬಂದಂತಾಗಿದೆ.
2022 (ಏಪ್ರಿಲ್-ಅಕ್ಟೋಬರ್) ಆರ್ಥಿಕ ವರ್ಷದಲ್ಲಿ 10,51,299 ಪ್ರಯಾಣಿಕರನ್ನು ನಿರ್ವಹಿಸಿದ್ದು, 2021-22ರಲ್ಲಿ ಇದೇ ಅವಧಿಯಲ್ಲಿ 4,29,929 ಪ್ರಯಾಣಿಕರನ್ನು ನಿರ್ವಹಿಸಿ ಶೇ. 144.51 ಬೆಳವಣಿಗೆ ಸಾಧಿಸಿದೆ. 2021-22ರ ಅವಧಿಯಲ್ಲಿ 4,814 ಪ್ರಯಾಣಿಕರನ್ನು ನಿರ್ವಹಿಸಿ ಶೇ.77.83 ಬೆಳವಣಿಗೆ ದಾಖಲಿಸಿದೆ.
ಈ ವಿಮಾನ ನಿಲ್ದಾಣ ದೇಶೀಯವಾಗಿ ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್, ಪುಣೆ ಮತ್ತು ಹುಬ್ಬಳ್ಳಿಗೆ ನೇರ ವಿಮಾನ ಸಂಪರ್ಕವನ್ನುಒದಗಿಸುತ್ತಿದೆ. ಅಂತಾರಾಷ್ಟ್ರೀಯವಾಗಿ ದುಬೈ, ದಮಾಮ್, ಮಸ್ಕತ್, ಕುವೈತ್, ದೋಹಾ, ಬಹರೈನ್ ಮತ್ತು ಅಬುಧಾಬಿಗೆ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.
ರೇಟಿಂಗ್ ಏಜೆನ್ಸಿ ಇನ್ವೆಸ್ಟ್‌ಮೆಂಟ್ ಇನ್‌ಫಾರ್ಮೇಷನ್ ಮತ್ತು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಆಫ್ ಇಂಡಿಯಾ ಲಿಮಿಟೆಡ್ (ಐಸಿಆರ್‌ಎ) ತನ್ನ ವಾರ್ಷಿಕ ವರದಿಯಲ್ಲಿ ಈ ಮಾಹಿತಿ ನೀಡಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.