ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರಕ್ಕೆ ಐಕಳ ಹರೀಶ್ ಶೆಟ್ಟಿ ಆಯ್ಕೆ

ಮಂಗಳೂರು: ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾನಿಲಯ ಡಾ.ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಸಹಯೋಗದೊಂದಿಗೆ ನ.21ರಿಂದ 27ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ದ ದಶಮಾನ ಸಡಗರ ನಡೆಯಲಿದೆ.
ಈ ಸಂದರ್ಭ ನೀಡಲಾಗುವ ‘ಯಕ್ಷಾಂಗಣ ರಾಜ್ಯೋತ್ಸವ’ ಪುರಸ್ಕಾರಕ್ಕೆ ಮುಂಬೈ ಉದ್ಯಮಿ ಮತ್ತು ಕಲಾಪೋಷಕ ಐಕಳ ಹರೀಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ನ.21ರಂದು ನಡೆಯುವ ಯಕ್ಷಾಂಗಣದ ದಶಮಾನ ಸಡಗರ ಉದ್ಘಾಟನಾ ಕಾರ್ಯಕ್ರಮದಲ್ಲಿ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ಪ್ರದಾನ ಮಾಡಲಾಗುತ್ತದೆ.
*ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಐಕಳ ಹರೀಶ್ ಶೆಟ್ಟಿ ಮುಂಬೈಯ ಪ್ರತಿಷ್ಠಿತ ಉದ್ಯಮಿ ಹಾಗೂ ಸಮಾಜ ಸೇವಕರು. ಶಾಲಾ ದಿನಗಳಿಂದಲೇ ಹುಟ್ಟೂರಿನಲ್ಲಿ ಉತ್ತಮ ಕ್ರೀಡಾಪಟುವಾಗಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ರಾಜ್ಯ-ರಾಷ್ಟ್ರಮಟ್ಟದಲ್ಲಿ ಮಿ.ದಕ್ಷಿಣ ಕನ್ನಡ, ಕರ್ನಾಟಕ ಕಿಶೋರ್, ಭಾರತ್ ಕಿಶೋರ್ ಪ್ರಶಸ್ತಿಗಳನ್ನು ಪಡೆದವರು.
ಮುಂಬೈ ಆಹಾರ್ ಉಪಾಧ್ಯಕ್ಷರಾಗಿ, ಸಾಯಿ ಸಂಧ್ಯಾ ಆರ್ಟ್ಸ್ ಗೌರವಾಧ್ಯಕ್ಷರಾಗಿ, ಮಾತೃಭೂಮಿ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ, ಎಸ್‌ಎಂಎಸ್ ಕಾಲೇಜು ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷರಾಗಿ ದುಡಿದವರು. ಬಂಟರ ಸಂಘದ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷರಾಗಿ ಅಖಿಲ ಭಾರತ ಮಟ್ಟದ ಕ್ರೀಡೋತ್ಸವ ನಡೆಸಿದ್ದಾರೆ. ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರಾಗಿ 1500 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, 1 ಕೋಟಿಗೂ ಅಧಿಕ ಶಾಶ್ವತ ನಿಧಿ ಸ್ಥಾಪನೆ, ಪ್ರಕೃತಿ ವಿಕೋಪಕ್ಕೆ ತುತ್ತಾದವರಿಗೆ ಆರ್ಥಿಕ ಸಹಾಯ, ಬಟ್ಟೆ ಬರೆ ವಿತರಣೆ ಇತ್ಯಾದಿಯಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಅನೇಕ ಜನಪರ ಸೇವೆ ಮಾಡಿದ್ದಾರೆ. ವಿವಿಧ ರಂಗದ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನೂರಾರು ಗೌರವ ಸನ್ಮಾನಗಳು ನಡೆದಿವೆ. ಅವರ ಸಾಧನೆಯ ಕುರಿತಾಗಿ ಮುಂಬೈ ವಿಶ್ವವಿದ್ಯಾನಿಲಯ ಪ್ರಕಟಿಸಿದ ’ಸಾರ್ವಭೌಮ’ ಗೌರವ ಗ್ರಂಥ ಇತ್ತೀಚೆಗೆ ಲೋಕಾರ್ಪಣೆಗೊಂಡಿದೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.