ಅಮೆರಿಕ ಮಧ್ಯಾವಧಿ ಚುನಾವಣೆ: ಟ್ರಂಪ್ ಪಕ್ಷಕ್ಕೆ ನಿರಾಸೆ

ಹೊಸದಿಲ್ಲಿ: ಅಮೆರಿಕದಲ್ಲಿ ನಡೆದ ಮಧ್ಯಾವಧಿ ಚುನಾವಣೆಯಲ್ಲಿ ಯಾವುದೇ ಅಚ್ಚರಿಯ ಫಲಿತಾಂಶ ಬಂದಿಲ್ಲ. ರಿಪಬ್ಲಿಕನ್ನರಿಗೆ ಭರ್ಜರಿ ವಿಜಯವೂ ಸಿಕ್ಕಿಲ್ಲ ಅಥವಾ ಆಡಳಿತಾರೂಢ ಡೆಮಾಕ್ರೆಟಿಕ್ ಪಕ್ಷ ಅಚ್ಚರಿಯ ಸಾಧನೆಯನ್ನೂ ಮಾಡಿಲ್ಲ. ಈ ಫಲಿತಾಂಶ 2024ಕ್ಕೆ ನಡೆಯುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ದಿಕ್ಸೂಚಿ ಎಂದು ವಿಶ್ಲೇಷಿಸಲಾಗಿತ್ತು.
ತೀವ್ರ ಹಣದುಬ್ಬರ ಮತ್ತು ಆರ್ಥಿಕ ಹಿಂಜರಿತದ ಭೀತಿಯ ಕಾರಣದಿಂದ ರಿಪಬ್ಲಿಕನ್ ಪಕ್ಷ ಕೆಳಮನೆ ಹಾಗೂ ಸೆನೆಟ್‍ನಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಅಮೆರಿಕ ಕಾಂಗ್ರೆಸ್‍ನ ಕೆಳಮನೆಯ ಎಲ್ಲ 435 ಸ್ಥಾನಗಳಿಗೆ ಹಾಗೂ ಸೆನೆಟ್‍ನ ಮೂರನೇ ಒಂದರಷ್ಟು ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅದರೆ ಅಧಿಕಾರ ಎರಡು ಪಕ್ಷಗಳ ನಡುವೆ ಹಂಚಿ ಹೋಗುವ ಸಾಧ್ಯತೆಗಳು ಕಾಣಿಸುತ್ತಿವೆ.
ಹಲವು ವಾರಗಳಿಂದ ರಿಪಬ್ಲಿಕನ್ನರು 'ಕೆಂಪು ಅಲೆ' ನಿರೀಕ್ಷಿಸಿದ್ದರು ಹಾಗೂ ಇದು ತಮಗೆ ಕಾಂಗ್ರೆಸ್‍ನಲ್ಲಿ ಅಧಿಕಾರ ಗಳಿಸಿಕೊಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದಾಗ್ಯೂ ಡೆಮಾಕ್ರಟಿಕ್ ಪಕ್ಷ ಕೆಂಪು ಅಲೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದು, ರಿಪಬ್ಲಿಕನ್ನರನ್ನು ಕೆಳಮನೆಯಲ್ಲಿ ಅಲ್ಪ ಬಹುಮತಕ್ಕೆ ಸೀಮಿತಗೊಳಿಸಿದೆ.
ಇತ್ತೀಚಿನ ವರದಿಗಳ ಪ್ರಕಾರ ರಿಪಬ್ಲಿಕನ್ನರು 197 ಸ್ಥಾನಗಳನ್ನು ಗೆದ್ದರೆ ಡೆಮಾಕ್ರಟಿಕ್ ಪಕ್ಷ 167 ಸ್ಥಾನಗಳನ್ನು ಹೊಂದಿದೆ. ಬಹುಮತಕ್ಕೆ 218 ಸ್ಥಾನಗಳ ಅಗತ್ಯವಿದೆ. ಇನ್ನೂ ಹಲವು ಸ್ಥಾನಗಳ ಫಲಿತಾಂಶ ಬರಬೇಕಿದ್ದು, ಕೆಲ ಫಲಿತಾಂಶಗಳು ನ್ಯಾಯಾಲಯದ ತೀರ್ಪುಗಳಿಗೆ ಅನುಸಾರವಾಗಿರುತ್ತದೆ. ಡೆಮಾಕ್ರಟಿಕ್ ಪಕ್ಷದ ಹಲವು ಮಂದಿ ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ತೋರಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ನಿಯಂತ್ರಣದಲ್ಲಿರುವ ಸೆನೆಟ್‍ನಲ್ಲಿ ಸಮಬಲದ ಹೋರಾಟ ನಡೆದಿದ್ದು, ಸೆನೆಟ್ ನಿಯಂತ್ರಣಕ್ಕೆ ಪಡೆಯಲು ರಿಪಬ್ಲಿಕನ್ನರಿಗೆ ಒಂದು ಸ್ಥಾನದ ಅಗತ್ಯವಿದೆ. ಸೆನೆಟ್ ರಿಪಬ್ಲಿಕನ್ನರ ನಿಯಂತ್ರಣಕ್ಕೆ ಬಂದಲ್ಲಿ ದೇಶದ ಅತ್ಯುನ್ನತ ನ್ಯಾಯಾಂಗ ಹುದ್ದೆಗೆ ಭರ್ತಿ ಮಾಡಲು ಬೈಡನ್ ಅವರು ಮಾಡಿರುವ ನಾಮನಿರ್ದೇಶನದ ವಿರುದ್ಧ ವಿಟೊ ಚಲಾಯಿಸುವ ಅಧಿಕಾರ ದೊರಕಲಿದೆ ಎಂದು timesofindia.com ವರದಿ ಮಾಡಿದೆ.