ನಾನಿಷ್ಟು ದಿನ ಎಲ್ಲಿದ್ದೆನೆಂದು ಬಿಜೆಪಿಗೆ ಉತ್ತರಿಸುವ ಅಗತ್ಯವಿಲ್ಲ; ಕ್ಷೇತ್ರದ ಜನತೆಗೆ ಗೊತ್ತಿದೆ: ಪ್ರಿಯಾಂಕ್ ಖರ್ಗೆ
ಬಿಜೆಪಿಗರಿಗೆ ನನ್ನ ಕಲರ್ ಪೋಸ್ಟರ್ ಪ್ರಿಂಟ್ ಮಾಡಿಸಿ ನಾನೇ ಒದಗಿಸುತ್ತೇನೆ; ಅದಕ್ಕೂ ಮೊದಲು ಭ್ರಷ್ಟಾಚಾರ ವಿಚಾರದಲ್ಲಿ ಚರ್ಚೆಗೆ ಬರಲಿ"
![ನಾನಿಷ್ಟು ದಿನ ಎಲ್ಲಿದ್ದೆನೆಂದು ಬಿಜೆಪಿಗೆ ಉತ್ತರಿಸುವ ಅಗತ್ಯವಿಲ್ಲ; ಕ್ಷೇತ್ರದ ಜನತೆಗೆ ಗೊತ್ತಿದೆ: ಪ್ರಿಯಾಂಕ್ ಖರ್ಗೆ ನಾನಿಷ್ಟು ದಿನ ಎಲ್ಲಿದ್ದೆನೆಂದು ಬಿಜೆಪಿಗೆ ಉತ್ತರಿಸುವ ಅಗತ್ಯವಿಲ್ಲ; ಕ್ಷೇತ್ರದ ಜನತೆಗೆ ಗೊತ್ತಿದೆ: ಪ್ರಿಯಾಂಕ್ ಖರ್ಗೆ](/images/placeholder.jpg)
ಕಲಬುರಗಿ, ನ.10: "ನಿಜ, ನಾನು ಕಳೆದ 50 ದಿನಗಳಿಂದ ಕ್ಷೇತ್ರಕ್ಕೆ ಬಂದಿಲ್ಲ. ರಾಹುಲ್ ಗಾಂಧಿ ಅವರ 'ಭಾರತ ಜೋಡೋ ಯಾತ್ರೆ'ಯಲ್ಲಿ ಭಾಗವಹಿಸಿ 511 ಕಿ.ಮೀ. ನಡೆದಿದ್ದೇನೆ. ಆ ನಂತರ ಖರ್ಗೆ ಸಾಹೇಬರ ಎಐಸಿಸಿ ಅಧ್ಯಕ್ಷರ ಚುನಾವಣೆಯಲ್ಲಿ ಭಾಗವಹಿಸಿದ್ದೆ. ಅದಾದ ನಂತರ ಕೋಲಿ ಕಬ್ಬಲಿಗ ಹಾಗೂ ಕುರುಬ ಜನಾಂಗದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಲು ಕೇಂದ್ರ ಸಚಿವರನ್ನು ಭೇಟಿ ಮಾಡಲು ಮೂರು ದಿನಗಳ ಕಾಲ ದಿಲ್ಲಿಯಲ್ಲಿದ್ದೆ. ಇದು ಕ್ಷೇತ್ರದ ಜನರಿಗೆ ಗೊತ್ತಿದೆ. ನಾನು ಎಲ್ಲಿದ್ದೆ ಎಂದು ಬಿಜೆಪಿಗೆ ಉತ್ತರಿಸುವ ಅಗತ್ಯವಿಲ್ಲ" ಎಂದು ಶಾಸಕ ಹಾಗೂ ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಖಾರವಾಗಿ ಹೇಳಿದ್ದಾರೆ.
ಅವರು ತಮ್ಮ ವಿರುದ್ಧ ಚಿತ್ತಾಪುರದಲ್ಲಿ ಬಿಜೆಪಿ ನಡೆಸಿದ ಪೋಸ್ಟರ್ ಅಭಿಯಾನದ ಕುರಿತಂತೆ ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಕೊರೋನಾ ಸಂದರ್ಭದಲ್ಲಿ ಬಿಜೆಪಿಗರು ಎಲ್ಲಿ ಹೋಗಿದ್ದರು? ನಾನು ಬಿಟ್ ಕಾಯಿನ್ ನಿಂದ ಹಿಡಿದು ಪಿಎಸ್ಸೈ ಹಗರಣದವರೆಗೆ ಈ ಸರ್ಕಾರದ 40 ಶೇ. ಕಮಿಷನ್ ಹೊಡೆದಿರುವುದರ ಬಗ್ಗೆ ಹೋರಾಟ ಮಾಡಿದ್ದೇನೆ. ಜೊತೆಗೆ ಪೇ ಸಿಎಂ ಅಭಿಯಾನ ಮಾಡಿದ್ದೇನೆ. ಹಾಗಾಗಿ ಅದಕ್ಕೆ ಪ್ರತಿಯಾಗಿ ಬಿಜೆಪಿಗರು ನನ್ನ ವಿರುದ್ದ ಪೋಸ್ಟರ್ ಅಭಿಯಾನ ಮಾಡಿದ್ದಾರೆ. ಮಾಡಲಿ ಬಿಡಿ, ಅದಕ್ಕೂ ಮೊದಲು ನನ್ನೊಂದಿಗೆ ಚರ್ಚೆಗೆ ಬರಲಿ. ಆಮೇಲೆ ಪೋಸ್ಟರ್ ಅಭಿಯಾನ ಮಾಡಲಿ ಬೇಕಿದ್ದರೆ ಅವರಿಗೆ ಕಲರ್ ಪೋಸ್ಟರ್ ಪ್ರಿಂಟ್ ಮಾಡಿಸಿ ನಾನೇ ಒದಗಿಸುತ್ತೇನೆ" ಎಂದು ಚಾಟಿ ಬೀಸಿದರು.
ಬಿಜೆಪಿಗರಿಗೆ ನೀವು ಯಾಕೆ ಟಾರ್ಗೆಟ್ ಆಗುತ್ತಿದ್ದೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದ ಹಗರಣವನ್ನು ಹೊರಗೆಳೆದಿದ್ದೇವೆ, ಭಾರತ ಜೋಡೋ ಯಾತ್ರೆಯಲ್ಲಿ ಸರ್ಕಾರದ ಭ್ರಷ್ಟಾಚಾರ ಬಗ್ಗೆ, 40 ಶೇ. ಕಮಿಷನ್ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಇದರಿಂದಾಗಿ ಬಿಜೆಪಿಗರಿಗೆ ಕನಸಲ್ಲೂ ಬೆಚ್ಚಿ ಬೀಳುವಂತಾಗಿದೆ. ಸಹಜವಾಗಿ ನನ್ನನ್ನು ಟಾರ್ಗೇಟ್ ಮಾಡುತ್ತಿದ್ದಾರೆ. ಈ ಮೊದಲು ನಾನು ಟಾಪ್ ವನ್ನಲ್ಲಿದ್ದೇ, ಬಹುಶಃ ಈಗ ಮೂರನೇ ಸ್ಥಾನದಲ್ಲಿರಬಹುದು ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಅವರ ' ಹಿಂದೂ' ಪದದ ವಿವಾದದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಖರ್ಗೆ ಅವರು, ಹಿಂದೂ ಎಂಬ ಪದ ಪರ್ಶಿಯನ್ ಭಾಷೆಯಿಂದ ಬಂದಿರುವುದಾಗಿ ತಾವು ಅಧ್ಯಯನ ಮಾಡಿದ್ದಾಗಿ ಮಾನವ ಬಂಧುತ್ವ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೇಳಿರುವುದಾಗಿ ಅವರು ಹೇಳಿದ್ದಾರೆ. ಆ ಬಗ್ಗೆ ಚರ್ಚೆಗೆ ಬರುವಂತೆ ಬಿಜೆಪಿಗರಿಗೆ ಆಹ್ವಾನ ನೀಡಿದ್ದಾರೆ. ಚರ್ಚೆಗೇಕೆ ಅವರು ಹೋಗಿಲ್ಲ? ಈ ಬಗ್ಗೆ ಜಾರಕಿಹೊಳಿ ಅವರು ಎಲ್ಲ ಟಿವಿ ಮಾಧ್ಯಮದವರೊಂದಿಗೆ ಲೈವ್ ಬಂದು ಸ್ಪಷ್ಟನೆ ನೀಡಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನಮ್ಮ ಕಾಲದಲ್ಲಿ ಅನುಮೋದನೆಗೊಂಡ ಯೋಜನೆಗಳನ್ನಷ್ಟೇ ಉದ್ಘಾಟನೆ ಮಾಡುತ್ತಿದ್ದಾರೆ. ಅವರಿಗೆ ಅಭಿವೃದ್ದಿ ಬೇಕಿಲ್ಲ, ಆದರೆ ಚುನಾವಣೆ ಬೇಕು. ಗುಜರಾತ್ ಜೊತೆಗೆ ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆಸಬೇಕಿತ್ತು. ಆದರೆ ಕೇವಲ ಹಿಮಾಚಲ ಪ್ರದೇಶದಲ್ಲಿ ಮಾತ್ರ ಚುನಾವಣೆ ನಡೆಸುವುದಾಗಿ ಹೇಳಿ ಈಗ ಗುಜರಾತ್ ನಲ್ಲೂ ಚುನಾವಣೆ ನಡೆಸುತ್ತಿದ್ದಾರೆ. ಈಗ ರಾಜ್ಯದಲ್ಲಿಯೂ ಚುನಾವಣೆ ಸಮೀಪಿಸುತ್ತಿದೆ. ಹಾಗಾಗಿ ಪದೇ ಪದೇ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ಟೀಕಿಸಿದರು.