ಡಿಸಿ ಮನ್ನಾ ಭೂಮಿ ಮಂಜೂರು ಮಾಡದೆ ವಂಚನೆ: ಜಗದೀಶ್ ಪಾಂಡೇಶ್ವರ
ಮಂಗಳೂರು: ದಲಿತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ

ಮಂಗಳೂರು, ನ.10: ದ.ಕ. ಜಿಲ್ಲೆಯಲ್ಲಿ ದಲಿತರಿಗೆ ಮೀಸಲಿಟ್ಟ ಖಾಲಿ ಇರುವ ಡಿಸಿ ಮನ್ನಾ ಭೂಮಿಯನ್ನು ಮಂಜೂರುಗೊಳಿಸುವಲ್ಲಿ ಸರಕಾರ ವಿಫಲವಾಗಿದೆ. ಸದ್ಯ ಚುನಾವಣೆ ಸಮೀಪಿಸುತ್ತಿದ್ದು, ಡಿಸಿ ಮನ್ನಾ ಹಂಚಿಕೆ ಬಗ್ಗೆ ಸೂಕ್ತ ಕ್ರಮ ವಹಿಸದಿದ್ದರೆ ಚುನಾವಣೆಯ ಸಂದರ್ಭ ದಲಿತರು ಸೂಕ್ತ ಉತ್ತರವನ್ನು ನೀಡಲಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ- ದಸಂಸ)ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಪಾಂಡೇಶ್ವರ ಹೇಳಿದ್ದಾರೆ.
ದಲಿತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಸಂಸ ವತಿಯಿಂದ ಮಂಗಳೂರು ಮಿನಿ ವಿಧಾನ ಸೌಧದ ಎದುರು ಆಯೋಜಿಸಿದ್ದ ಧರಣಿ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
2017ರಲ್ಲಿ ಅಂದಿನ ಜಿಲ್ಲಾಧಿಕಾರಿ ಡಿಸಿ ಮನ್ನಾ ಭೂ ಮಂಜೂರಾತಿಗಾಗಿ ಪ್ರಸ್ತಾವ ಸಲ್ಲಿಸಿದ್ದರೂ ಈವರೆಗೆ ದಲಿತರ ಕನಸು ನನಸು ಮಾಡುವಲ್ಲಿ ಸರಕರಾ ವಿಫಲವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕಾರ್ಪೊರೇಶನ್ ಬ್ಯಾಂಕ್ ಪರಿವರ್ತನೆಗೊಂಡ ಬಳಿಕ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವಿವಿಧ ಶಾಖೆಗಳಲ್ಲಿ ದುಡಿಯುತ್ತಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ 19 ಮಂದಿ ನೌಕರರನ್ನು ಬ್ಯಾಂಕ್‌ನ ಆಡಳಿತ ಮಂಡಳಿ ಹಾಗೂ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಉದ್ದೇಶಪೂರ್ವಕವಾಗಿ ಕಿರುಕುಳ ನೀಡಿ ವಜಾಗೊಳಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಅವರು ಈ ಸಂದರ್ಭ ಆಗ್ರಹಿಸಿದರು.
ಬಿಜೆಪಿ ಸರಕಾರದ ಆಡಳಿತದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ನಿರ್ಲಕ್ಷಿಸುವುದು, ವಂಚಿಸುವುದು, ದೌರ್ಜನ್ಯ ಎಸಗುವುದು ಹೆಚ್ಚಾಗಿದೆ ಎಂದು ಜಿಲ್ಲಾ ಸಂಘಟನಾ ಸಂಚಾಲಕ ಸೇಸಪ್ಪ ನೆಕ್ಕಿಲು ಆರೋಪಿಸಿದರು.
ಪುತ್ತೂರು ತಾಲೂಕಿನಲ್ಲಿ ಹೋರಾಟದ ಫಲವಾಗಿ ನೂತನವಾಗಿ ಡಾ.ಬಿ.ಆರ್. ಅಂಬೇಡ್ಕರ್ ಭವನ ಮಾಡಲು ಪಹಣಿ ಪತ್ರ ತಯಾರಾಗಿದ್ದರೂ ಅಲ್ಲಿನ ತಹಶೀಲ್ದಾರ್ ಹಾಗೂ ಸಹಾಯಕ ಆಯುಕ್ತರು ಸಂವಿಧಾನ ವಿರೋಧಿ ನೀತಿ ಅನುಸರಿಸಿ ಪಹಣಿ ಪತ್ರ ರದ್ದು ಪಡಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಜರುಗಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಪರಿಶಿಷ್ಟ ಜಾತಿ, ಪಂಗಡದ ಉನ್ನತ ವಿದ್ಯಾಭ್ಯಾಸ ಮಾಡಲಿಚ್ಛಿಸುವ ವಿದ್ಯಾರ್ಥಿಗಳಿಗೆ ಕೆಲವೊಂದು ಬ್ಯಾಂಕ್‌ಗಳಲ್ಲಿ ಸಾಲ ನೀಡಲು ಸತಾಯಿಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದರೂ ಸ್ಪಂದನೆ ದೊರಕಿಲ್ಲ. ಮಂಗಳೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಕಚೇರಿಯನ್ನು ದ.ಕ. ಜಿಲ್ಲಾಧಿಕಾರಿ ಕಚೇರಿ ಅಥವಾ ಮಂಗಳೂರು ತಾಲೂಕು ತಹಶೀಲ್ದಾರ್ ಕಚೇರಿಗೆ ವರ್ಗಾಯಿಸಬೇಕು ಎಂಬ ಹಲವಾರು ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಈ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಈ ಸಂದರ್ಭ ಸಲ್ಲಿಸಲಾಯಿತು.
ಧರಣಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ನಾಗೇಶ್ ಮುಲ್ಲಕಾಡು, ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್., ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಬಿ.ಕೆ. ವಸಂತ್, ಕಡಬ ತಾಲೂಕು ಸಂಚಾಲಕ ವಸಂತ ಕುಬಲಾಡಿ, ಮೂಡಬಿದ್ರೆ ತಾಲೂಕು ಸಂಘಟನಾ ಸಂಚಾಲಕ ಹರೀಶ್ ಮೂಡುಬಿದಿರೆ ಮೊದಲಾದವರು ಉಪಸ್ಥಿತರಿದ್ದರು.