ಕೆಎಸ್ಸಾರ್ಟಿಸಿಯು ದೀಪಾವಳಿ ಪ್ಯಾಕೇಜ್ ಪ್ರವಾಸ ಬಸ್ ನಿಯಮಬಾಹಿರ: ದಿನೇಶ್ ಕುಂಪಲ ಆರೋಪ
ಮಂಗಳೂರು, ನ. 10: ಸಾರಿಗೆ ಇಲಾಖೆಯ ಪರವಾನಿಗೆಯನ್ನು ಪಡೆಯದೆ, ವಿಶೇಷ ತೆರಿಗೆಯನ್ನೂ ಪಾವತಿಸದೆ ಕೆಎಸ್ಸಾರ್ಟಿಸಿಯು ದೀಪಾವಳಿ ಪ್ಯಾಕೇಜ್ ಪ್ರವಾಸ ಬಸ್ ಮಾಡಿರುವುದು ನಿಯಮಬಾಹಿರ ಎಂದು ದ.ಕ. ಟ್ಯಾಕ್ಸಿಮೆನ್ಸ್ ಹಾಗೂ ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಅಧ್ಯಕ್ಷ ಎಂ.ದಿನೇಶ್ ಕುಂಪಲ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ಆರೋಪ ಮಾಡಿದ ಅವರು, ಪ್ಯಾಕೇಜ್ ಬಸ್‌ನ ಮೂಲಕ ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್‌ಗಳ ಬಾಡಿಗೆಗೆ ಹೊಡೆತ ನೀಡಿರುವುದರಿಂದ ತೆರಿಗೆ ಪಾವತಿಸಿ ಕಾರ್ಯನಿರ್ವಹಿಸುತ್ತಿರುವವರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಹೇಳಿದರು.
ಕೆಎಸ್ಸಾರ್ಟಿಸಿಯು ಅನಧಿಕೃತವಾಗಿ ವಿಶೇಷ ಪ್ಯಾಕೇಜ್ ಪ್ರವಾಸ ಕೈಗೊಳ್ಳಲು ಅವಕಾಶ ನೀಡಬಾರದು ಹಾಗೂ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕ-ಮಾಲಕರ ಹಿತಾಸಕ್ತಿಯನ್ನು ಕಾಪಾಡಲು ಇಲ್ಲಿನ ಸಂಸದರು, ಶಾಸಕರು ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಟ್ಯಾಕ್ಸಿ ವಾಹನದ ಎರಡೂ ಬದಿಗಳಲ್ಲಿ ಪೂರ್ತಿಯಾಗಿ ಹಳದಿ ಸ್ಟಿಕ್ಕರ್ ಅಳವಡಿಸಬೇಕೆಂದು ತಿಳಿಸಿರುವುದು ಖಂಡನೀಯ. ಸುರತ್ಕಲ್ ಟೋಲ್‌ನಲ್ಲಿ ಕೆಎ 19 ಖಾಸಗಿ ವಾಹನಗಳಿಗೆ ಉಚಿತವಿರುವ ಹಾಗೆ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ಗಳಿಗೂ ಉಚಿತ ಸೌಲಭ್ಯ ನೀಡಬೇಕು. ಮ್ಯಾಕ್ಸಿ ಕ್ಯಾಬ್ ವಾಹನಗಳಿಗೆ ಪೊಲೀಸರಿಂದ ಆಗುತ್ತಿರುವ ಕಿರುಕುಳ ತಪ್ಪಿಸಬೇಕು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್ ದರವನ್ನು ದುಪ್ಪಟ್ಟು ಮಾಡಲಾಗಿದೆ. ಇಲ್ಲಿ ಖಾಸಗಿ ವಾಹನಗಳಿಗೆ ಮೊದಲಿನ 10 ನಿಮಿಷ ಉಚಿತ ಎಂಬ ನಾಮಲಕ ಅಳವಡಿಸಿ ಟ್ಯಾಕ್ಸಿ ವಾಹನಗಳಿಗೆ ಮಾತ್ರ ಟಿಕೆಟ್ ನೀಡಿ ಒಂದು ನಿಮಷದಲ್ಲಿ ಹೊರಗೆ ಹೋದರೂ 90 ರೂ. ಪಾವತಿಸಬೇಕಾಗಿರುವುದು ನಮಗೆ ಬಹುನಷ್ಟ ಉಂಟಾಗಿದೆ ಎಂದವರು ದೂರಿದರು.
ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಅ.15ರಂದು ಆರ್‌ಟಿಓ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಆನಂದ್ ಕೆ., ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ ಕುತ್ತಾರ್, ದಿನೇಶ್ ಮಂಗಳಾದೇವಿ, ಸಂಘಟನಾ ಕಾರ್ಯದರ್ಶಿ ಕರುಣಾಕರ ಕುಂಟಿಕಾನ ಉಪಸ್ಥಿತರಿದ್ದರು.