ಮಂಗಳೂರು: ಕರ್ತವ್ಯದ ವೇಳೆ ಅಪರಿಚಿತ ವ್ಯಕ್ತಿಯ ಮೃತದೇಹ ಆಸ್ಪತ್ರೆಗೆ ಸಾಗಿಸಿದ ಪೊಲೀಸ್ ಪೇದೆ
ಮಾನವೀಯತೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ: ಪೊಲೀಸ್ ಅಧಿಕಾರಿಗಳಿಂದ ಪ್ರಶಂಸಾ ಪತ್ರ

ಮಂಗಳೂರು, ನ. 10: ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಒಬ್ಬರು ಬುಧವಾರ ಕರ್ತವ್ಯದಲ್ಲಿದ್ದ ಸಂದರ್ಭ ತಾನೇ ಮುಂದೆ ನಿಂತು ಅನಾಮಧೇಯ ಮೃತದೇಹವೊಂದನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಹೆಡ್ ಕಾನ್‌ಸ್ಟೆಬಲ್ ಸಂಪತ್ ಬಂಗೇರ ಅವರಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪ್ರಶಂಸಾ ಪತ್ರ ನೀಡಿ ಅಭಿನಂದಿಸಿದ್ದಾರೆ.
ಸಂಪತ್ ಬಂಗೇರ ಬುಧವಾರ ಕರ್ತವ್ಯದಲ್ಲಿದ್ದ ಸಮಯ ನಗರದ ಮಿನಿ ವಿಧಾನದ ಸೌಧದ ಎದುರು ಅಪರಿಚಿತ ವ್ಯಕ್ತಿಯ ಮೃತದೇಹವನ್ನು ಗಮನಿಸಿದ್ದಾರೆ. ಈ ಸಂದರ್ಭ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಬರುವುದನ್ನೂ ಕಾಯದೆ, ಸಹದ್ಯೋಗಿಗಳ ನೆರವಿನೊಂದಿಗೆ ತಾನೇ ಮುಂದೆ ನಿಂತು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಇಂದು ಕಚೇರಿಯಲ್ಲಿ ಡಿಸಿಪಿ ಅಂಶು ಕುಮಾರ್ ಉಪಸ್ಥಿತಿಯಲ್ಲಿ ಸಂಪತ್ ಬಂಗೇರರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ನಿಮ್ಮ ಕಾರ್ಯತತ್ಪರತೆ ಮತ್ತು ಕರ್ತವ್ಯ ಪ್ರಜ್ಞೆ ಇತರರಿಗೆ ಮಾದರಿಯಾಗಲಿ ಎಂದು ಅಭಿನಂದಿಸಿದ್ದಾರೆ.