ಸುಶಾಸನ ಸಮಿತಿ ಗೌರವಾಧ್ಯಕ್ಷರಾಗಿ ಪೇಜಾವರಶ್ರೀ

ಉಡುಪಿ: ಭಾರತೀಯ ಮೌಲ್ಯಗಳ ಪುನರುತ್ಥಾನ, ರಾಷ್ಟ್ರಪ್ರೇಮದ ಉದ್ದೀಪನಕ್ಕಾಗಿ ಸುಶಾಸನ ಸಮಿತಿಯನ್ನು ರಚಿಸಲಾಗಿದ್ದು, ಇದರ ಗೌರವಾಧ್ಯಕ್ಷ ರಾಗಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿಯ ಸುಧಾಕರ ಆಚಾರ್ಯ ತಿಳಿಸಿದ್ದಾರೆ.
ಸುಶಾಸನ ಸಮಿತಿಯ ನೇತೃತ್ವದಲ್ಲಿ ಗತ ಇತಿಹಾಸದ ಮರುಸೃಷ್ಟಿಯ ಆಶಯ ಗಳೊಂದಿಗೆ ಪವನ ಕಿರಣಕೆರೆ ವಿರಚಿತ ’ಕಾಶ್ಮೀರ ವಿಜಯ’ ಎಂಬ ವಿನೂತನ ಯಕ್ಷಗಾನ ತಾಳಮದ್ದಳೆ ಪ್ರಸಂಗ ರಚಿಸಿ ವಿವಿಧೆಡೆ ಪ್ರದರ್ಶಿಸಲು ಉದ್ದೇಶಿಸಲಾ ಗಿದೆ ಎಂದವರು ತಿಳಿಸಿದರು.
ಸುಶಾಸನ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ವಿವಿಧ ಕ್ಷೇತ್ರಗಳ ಅನುಭವಿಗಳನ್ನು ಸದಸ್ಯರನ್ನಾಗಿಸಲಾಗಿದೆ ಎಂದು ಯಕ್ಷ ಸಂಘಟಕ ಸುಧಾಕರ ಆಚಾರ್ಯ ತಿಳಿಸಿದ್ದಾರೆ. ಸಮಿತಿಯ ಮೂಲಕ ಕಾಶ್ಮೀರದ ನೈಜ ಇತಿಹಾಸವನ್ನು ಪ್ರಭಾವಿ ಮಾಧ್ಯಮವಾದ ಯಕ್ಷಗಾನ ಪ್ರದರ್ಶನ ಹಾಗೂ ತಾಳಮದ್ದಳೆ ಮೂಲಕ ತಿಳಿಸಲು ನಿರ್ಧರಿಸಲಾಗಿದೆ ಎಂದರು.
ಜ.14ರಂದು ಉಡುಪಿ ಹಾಗೂ ೧೫ರಂದು ಮಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದ್ದು ರಾಷ್ಟ್ರೀಯ ಚಿಂತಕರಿಂದ ಉಪನ್ಯಾಸ, ಸನ್ಮಾನ ಹಾಗೂ ಕಾಶ್ಮೀರ ವಿಜಯ ತಾಳಮದ್ದಳೆ ಏರ್ಪಡಿಸಲು ಪೇಜಾವರ ಮಠದಲ್ಲಿನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ಅವರು ಹೇಳಿದರು.
ಸಭೆಯಲ್ಲಿ ಟಿ. ಶಂಭು ಶೆಟ್ಟಿ, ಪ್ರೊ.ಎಂ.ಎಲ್.ಸಾಮಗ, ವಿಷ್ಣುಮೂರ್ತಿ ಆಚಾರ್ಯ, ಜಯಕರ ಶೆಟ್ಟಿ ಇಂದ್ರಾಳಿ, ಪುರುಷೋತ್ತಮ ಭಂಡಾರಿ ಅಡ್ಯಾರು, ಪ್ರದೀಪ ಆಳ್ವ, ಭುವನಪ್ರಸಾದ ಹೆಗ್ಡೆ, ಡಾ. ವಿಟ್ಲ ಹರೀಶ ಜೋಶಿ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಮೊದಲಾದವರು ಉಪಸ್ಥಿತರಿದ್ದರು.







