ರಾಜ್ಯದ ಎಲ್ಲ ಪೌರ ಕಾರ್ಮಿಕರನ್ನು ಖಾಯಂಗೊಳಿಸಿ: ಸಿಎಂ ಬೊಮ್ಮಾಯಿ ಗೆ ಪತ್ರ ಬರೆದ AICCTU

ಬೆಂಗಳೂರು, ನ.10: ಮೊದಲ ಹಂತದಲ್ಲಿ 11,133 ಪೌರಕಾರ್ಮಿಕರ ನೇಮಕಾತಿ ಜತೆಗೆ ನೇರಪಾವತಿಯ ಪೌರಕಾರ್ಮಿಕರು, ಕಾರ್ಮಿಕರು, ಲೋಡರ್‍ಗಳು, ಚಾಲಕರು, ಕ್ಲೀನರ್‍ಗಳನ್ನೂ ಖಾಯಂಗೊಳಿಸಬೇಕೆಂದು ಒತ್ತಾಯಿಸಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ (All India Central Council of Trade Unions) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದೆ.
ಪೌರ ಕಾರ್ಮಿಕರನ್ನು ಖಾಯಂಗೊಳಿಸುವುದಕ್ಕೆ ಸಂಬಂಧಿಸಿದಂತೆ ರಚಿಸಿರುವ ಸಮಿತಿ ನೀಡಿರುವ ವರದಿಯನ್ನಾಧಾರಿಸಿ 11,133 ಪೌರ ಕಾರ್ಮಿಕರನ್ನು ನೇಮಕಾತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿಗಳು 2022ರ ನ.6ರಂದು ಸಾರ್ವಜನಿಕ ಹೇಳಿಕೆ ನೀಡಿದ್ದಾರೆ. ಈ ಪೌರಕಾರ್ಮಿಕರ ನೇಮಕಾತಿ ಜತೆಗೆ ನಗರಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೇರಪಾವತಿಯ ಪೌರಕಾರ್ಮಿಕರನ್ನೂ ಖಾಯಂಗೊಳಿಸಬೇಕೆಂದು ಸಿಎಂಗೆ ಎಐಸಿಸಿಟಿಯು ಮನವಿ ಮಾಡಿದೆ.
ರಾಜ್ಯದಲ್ಲಿ ಕೆಲಸ ನಿರ್ವಹಿಸುತ್ತಿರುವ 43 ಸಾವಿರ ಪೌರಕಾರ್ಮಿಕರನ್ನೂ ಖಾಯಂಗೊಳಿಸಬೇಕು. ಜತೆಗೆ ಅವರ ವಿವಿಧ ಹಕ್ಕೋತ್ತಾಯಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದೆ.





