ಪ್ರಮುಖ ಮೂಲಸೌಕರ್ಯಗಳು ಸೈಬರ್ ದಾಳಿಗಳಿಗೆ ಸುಲಭದ ತುತ್ತಾಗಿವೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಹೊಸದಿಲ್ಲಿ,ನ.10: ಆಂತರಿಕ ಮತ್ತು ಬಾಹ್ಯ ಭದ್ರತೆ ನಡುವಿನ ಅಂತರವು ಕಡಿಮೆಯಾಗುತ್ತಿದೆ ಮತ್ತು ಭದ್ರತಾ ಬೆದರಿಕೆಗಳ ಹೊಸ ಆಯಾಮಗಳು ಹೊರಹೊಮ್ಮುತ್ತಿವೆ,ಇವುಗಳನ್ನು ವರ್ಗೀಕರಿಸುವುದು ಕಷ್ಟವಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ (Rajnath Singh)ಅವರು ಗುರುವಾರ ಇಲ್ಲಿ ಹೇಳಿದರು.
ನ್ಯಾಷನಲ್ ಡಿಫೆನ್ಸ್ ಕಾಲೇಜಿನ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು,‘ಚಲನಶೀಲವಲ್ಲದ’('immobile') ಮತ್ತು ‘ಸಂಪರ್ಕರಹಿತ ’('Contactless')ಯುದ್ಧದ ಬಗ್ಗೆ ತನ್ನ ಕಳವಳವನ್ನು ವ್ಯಕ್ತಪಡಿಸಿದರು.
‘ಚಲನಶೀಲವಲ್ಲದ ಮತ್ತು ಸಂಪರ್ಕರಹಿತ ಯುದ್ಧದ ವರ್ಗದಡಿ ಬರುವ ಭದ್ರತಾ ಬೆದರಿಕೆಗಳನ್ನು ನಾವು ಎದುರಿಸುತ್ತಿದ್ದೇವೆ. ಸೈಬರ್ ಯುದ್ಧ ಮತ್ತು ಮಾಹಿತಿ ಯುದ್ಧ ಇಂತಹ ಭದ್ರತಾ ಬೆದರಿಕೆಗಳಾಗಿವೆ. ನಿರ್ಣಾಯಕ ಮೂಲಸೌಕರ್ಯಗಳು ಸೈಬರ್ ದಾಳಿಗಳಿಗೆ ಸುಲಭಭೇದ್ಯವಾಗಿರುವುದು ದೊಡ್ಡ ಕಳವಳವಾಗಿದೆ. ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯಂತಹ ಪ್ರಮುಖ ಮೂಲಸೌಕರ್ಯ ಹೆಚ್ಚೆಚ್ಚು ಸಂಕೀರ್ಣಗೊಳ್ಳುತ್ತಿದೆ ಮತ್ತು ಸಂಪರ್ಕಿತ ಸಾಧನಗಳ ನೆಟ್ವರ್ಕಗಳ ಮೇಲೆ ಅವಲಂಬಿತವಾಗಿದೆ ’ಎಂದು ಸಿಂಗ್ ಹೇಳಿದರು.
ಸಾರ್ವಜನಿಕ ಕ್ಷೇತ್ರದ ಸಾರಿಗೆ ಸೇವೆಗಳು,ದೂರಸಂಪರ್ಕ ಮತ್ತು ಪ್ರಮುಖ ತಯಾರಿಕಾ ಸ್ಥಾವರಗಳೊಂದಿಗೆ ಇಂಧನ ಕ್ಷೇತ್ರವು ಸೈಬರ್ ದಾಳಿಯ ಮುಖ್ಯಗುರಿಗಳಲ್ಲೊಂದಾಗಿದೆ ಎಂದು ಅವರು ಬೆಟ್ಟು ಮಾಡಿದರು.
ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳುಸುದ್ದಿಗಳ ಹರಡುವಿಕೆ ಕುರಿತು ಮಾತನಾಡಿದ ಸಿಂಗ್,ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಎಷ್ಟು ಸುಳ್ಳು ಸುದ್ದಿಗಳು ಮತ್ತು ದ್ವೇಷ ವಿಷಯಗಳನ್ನು ಸಮಾಜದಲ್ಲಿ ಹರಡಬಹುದು ಎಂಬ ಬಗ್ಗೆ ಯಾವುದೇ ಲೆಕ್ಕವಿಲ್ಲ ಎಂದರು.
ಸಾಮೂಹಿಕ ಅಭಿಪ್ರಾಯ ಅಥವಾ ದೃಷ್ಟಿಕೋನವನ್ನು ರೂಪಿಸಲು ಸಾಮಾಜಿಕ ಮಾಧ್ಯಮ ಮತ್ತು ಇತರ ಆನ್ಲೈನ್ ಕಂಟೆಂಟ್ ಜನರೇಷನ್ ವೇದಿಕೆಗಳು ಸಂಘಟಿತವಾಗಿ ಬಳಕೆಯಾಗುತ್ತಿವೆ. ಹಾಲಿ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮಾಹಿತಿ ಯುದ್ಧದ ನಿಯೋಜನೆಯು ಹೆಚ್ಚು ಸ್ಪಷ್ಟವಾಗಿದೆ ಎಂದು ಹೇಳಿದ ಸಿಂಗ್,ಮಾಹಿತಿ ಯುದ್ಧವು ನಮ್ಮ ರಾಜಕೀಯ ಸ್ಥಿರತೆಗೆ ಬೆದರಿಕೆಯನ್ನೊಡ್ಡುವ ಸಾಮರ್ಥ್ಯವನ್ನು ಹೊಂದಿದೆ ಎಂದರು.







