ಮಿಥೇನ್ ಹೊರಸೂಸುವಿಕೆ ನಿಯಂತ್ರಣಕ್ಕೆ ಚೀನಾ, ಭಾರತ ಗಮನ ಹರಿಸಬೇಕು: ಅಮೆರಿಕ ಆಗ್ರಹ

ಶರ್ಮ್ ಎಲ್ ಶೇಕ್, ನ.10: ಮಿಥೇನ್ ಹೊರಸೂಸುವಿಕೆ ಪ್ರಮಾಣವನ್ನು ನಿಯಂತ್ರಿಸುವ ಜಾಗತಿಕ ಪ್ರಯತ್ನಗಳಿಗೆ ಪೆಸಿಫಿಕ್ ದ್ವೀಪರಾಷ್ಟ್ರಗಳು ಸೇರಬೇಕು. ಇದು ಪ್ರಮುಖ ಮಿಥೇನ್ ಹೊರಸೂಸುವ ದೇಶಗಳಾದ ಚೀನಾ(China) ಮತ್ತು ಭಾರತಕ್ಕೆ ಒಂದು ಮಾದರಿಯನ್ನು ರೂಪಿಸಿದಂತಾಗುತ್ತದೆ ಎಂದು ಅಮೆರಿಕ(America)ದ ಹವಾಮಾನ ರಾಯಭಾರಿ ಜಾನ್ ಕೆರ್ರಿ ಗುರುವಾರ ಒತ್ತಾಯಿಸಿದ್ದಾರೆ.
ಈಜಿಪ್ಟ್ ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ(HWO)ಯ ಸಿಒಪಿ27 ಶೃಂಗಸಭೆಯಲ್ಲಿ ಮಾತನಾಡಿದ ಅವರು, ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್ ಗೆ ಸೀಮಿತಗೊಳಿಸುವ ಜಾಗತಿಕ ಪ್ರಯತ್ನಗಳಲ್ಲಿ ಹೊರಸೂಸುವಿಕೆಯನ್ನು ಕಡಿತಗೊಳಿಸುವ ತಮ್ಮ ಪ್ರತಿಜ್ಞೆಯಲ್ಲಿ ಮಿಥೇನ್ ಅನ್ನೂ ಪರಿಗಣಿಸಬೇಕಿರುವ 20 ದೇಶಗಳಲ್ಲಿ ಚೀನಾ ಮತ್ತು ಭಾರತ ಸೇರಿವೆ. ಈ ಎರಡು ದೇಶಗಳು ಮಿಥೇನ್ ಹೊರಸೂಸುವ ಪ್ರಮುಖ ದೇಶಗಳಾಗಿವೆ ಎಂದು `ಸಾಗರ ರಕ್ಷಣೆ' ಕುರಿತ ಅಧಿವೇಶನದಲ್ಲಿ ಕೆರ್ರಿ ಹೇಳಿದ್ದಾರೆ.
ಮಿಥೇನ್ ಹೊರಸೂಸುವಿಕೆಯಲ್ಲಿ ದ್ವೀಪರಾಷ್ಟ್ರಗಳ ಪಾಲು ಅಲ್ಪವಾದರೂ, ಅದರ ನಿಯಂತ್ರಣದ ಜಾಗತಿಕ ಪ್ರಯತ್ನಕ್ಕೆ ಈ ದೇಶಗಳ ಸೇರ್ಪಡೆ ಭಾರೀ ವ್ಯತ್ಯಾಸ ಉಂಟು ಮಾಡಬಹುದು. ಹೀಗೆ ಪ್ರಪಂಚದ ಉಳಿದ ಭಾಗಗಳೂ ಈ ಪ್ರಯತ್ನಕ್ಕೆ ಸೇರಿಕೊಂಡರೆ, ಮತ್ತು ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಿದರೆ, ಈ 20 ದೇಶಗಳೂ ಹೊರಸೂಸುವಿಕೆ ನಿಯಂತ್ರಣ ಯೋಜನೆಯಲ್ಲಿ ಮಿಥೇನ್ ಅನ್ನೂ ಪರಿಗಣಿಸಲು ಮಾದರಿ ರೂಪಿಸಿದಂತಾಗುತ್ತದೆ. ಆದ್ದರಿಂದ ಕುಕ್ ದ್ವೀಪಗಳು, ಕಿರಿಬತಿ, ಮಾರ್ಷಲ್ ದ್ವೀಪಗಳು, ನಾವುರು, ಪಪುವಾ ನ್ಯೂಗಿನಿಯಾ ಮತ್ತು ಸೊಲೊಮನ್ ದ್ವೀಪಗಳು ಮಾದರಿ ರೂಪಿಸಲು ನೆರವಾಗಬಹುದು. ಪ್ರಪಂಚದ ಪ್ರತಿಯೊಂದು ದೇಶಕ್ಕೂ ನಿಮ್ಮ ಕ್ರಿಯೆಯಿಂದ ಉತ್ತೇಜನ ದೊರಕಬಹುದು ಎಂದವರು ಹೇಳಿದ್ದಾರೆ.
ಇಂಗಾಲದ ಡೈಆಕ್ಸೈಡ್ ಬಳಿಕ, ಜಾಗತಿಕ ತಾಪಮಾನಕ್ಕೆ ಅತ್ಯಧಿಕ ಪಾಲು ಮಿಥೇನ್ನಿಂದ ಬರುತ್ತದೆ. ಇದು ಪಳೆಯುಳಿಕೆ ಇಂಧನಗಳ ಉತ್ಪಾದನೆ, ಸಾಗಣೆ ಮತ್ತು ಬಳಕೆಯಿಂದ ಉತ್ಪತ್ತಿಯಾಗುತ್ತದೆ. ಅಲ್ಲದೆ ಆದ್ರ್ರಭೂಮಿ ಮತ್ತು ಇತರೆಡೆ ಸಾವಯವ ಪದಾರ್ಥಗಳ ಕೊಳೆಯುವಿಕೆಯಿಂದ ಉತ್ಪತ್ತಿಯಾಗುತ್ತದೆ.