ಸಿಒಪಿ ಶೃಂಗಸಭೆಯಲ್ಲಿ 'ತಪ್ಪುಭಾಷಣ' ಮಾಡಿದ ವಿಶ್ವಸಂಸ್ಥೆ ಮುಖ್ಯಸ್ಥ

ಶರ್ಮ್ ಎಲ್ ಶೇಕ್, ನ.10: ಈಜಿಪ್ಟ್ ನಲ್ಲಿ ನಡೆಯುತ್ತಿರುವ ಸಿಒಪಿ27 ಹವಾಮಾನ ಸಮಾವೇಶದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ (Antonio Guterres)ತಪ್ಪು ಭಾಷಣ ಮಾಡಿದ ಘಟನೆ ಬುಧವಾರ ನಡೆದಿದೆ.
ತನ್ನ ಪ್ರಮಾದ ಅರಿವಾಗುತ್ತಿದ್ದಂತೆಯೇ ಗುಟೆರೆಸ್ ಗೆ ನಗು ತಡೆಯಲಾಗಲಿಲ್ಲ. ಸಭಿಕರೂ ಅವರೊಂದಿಗೆ ಸೇರಿದರು. ಬಳಿಕ ಗುಟೆರಸ್ ತಾನು ಓದಬೇಕಿದ್ದ ಭಾಷಣವನ್ನು ಮಾಡಿದರು ಎಂದು ವರದಿಯಾಗಿದೆ. ಬುಧವಾರ ಗುಟೆರಸ್ ಸಮಾವೇಶದ ಅಧಿವೇಶನವೊಂದರ ಉದ್ಘಾಟನಾ ಭಾಷಣ ಮಾಡಬೇಕಿತ್ತು. ಇಂಗಾಲದ ಹೊರಸೂಸುವಿಕೆ ನಿಯಂತ್ರಣದ ವಿಷಯದಲ್ಲಿ ಅಮೆರಿಕದ ಮಾಜಿ ಉಪಾಧ್ಯಕ್ಷ ಅಲ್ಗೋರೆ(Algore) ಹಾಗೂ ಗುಟೆರಸ್ ಮಾತನಾಡಬೇಕಿತ್ತು.
ಭಾಷಣ ಆರಂಭಿಸಿದ ಗುಟೆರಸ್, ಕೆಲವು ಪದಗಳನ್ನು ನುಡಿದ ಬಳಿಕ ಸ್ವಲ್ಪ ಗೊಂದಲಕ್ಕೆ ಒಳಗಾದರು. ಭಾಷಣ ನಿಲ್ಲಿಸಿ, ತನ್ನ ಎದುರು ಇದ್ದ ಟಿಪ್ಪಣಿಯನ್ನು ಗಮನಿಸಿದಾಗ ಅವರಿಗೆ ತನ್ನ ಪ್ರಮಾದ ಅರಿವಿಗೆ ಬಂದಿತು. `ಬಹುಷಃ ನಾನು ತಪ್ಪು ಭಾಷಣ ಮಾಡಿದ್ದೇನೆ' (``Maybe I gave the wrong speech'')ಎಂದು ಗುಟೆರಸ್ ಹೇಳಿದಾಗ ಸಭೆಯಲ್ಲಿದ್ದವರಿಗೆ ನಗು ತಡೆಯಲಾಗಲಿಲ್ಲ. ಗುಟೆರಸ್ ಕೂಡಾ ಅವರೊಂದಿಗೆ ಸೇರಿ ನಕ್ಕುಬಿಟ್ಟರು.
ಈ ಅಧಿವೇಶನದ ಬಳಿಕ ಯುವಜನರ ತಂಡವೊಂದನ್ನು ಉದ್ದೇಶಿಸಿ ನಾನು ಮಾತನಾಡುವ ಕಾರ್ಯಕ್ರಮವಿದೆ. ಆ ಭಾಷಣವನ್ನು ಇಲ್ಲಿ ಆರಂಭಿಸಿದ್ದು ಗೊಂದಲಕ್ಕೆ ಕಾರಣವಾಗಿದೆ. ಕ್ಷಮೆ ಯಾಚಿಸುತ್ತೇನೆ' ಎಂದು ಹೇಳಿದ ಅವರು ತಾನು ಮಾಡಬೇಕಿದ್ದ ಭಾಷಣವನ್ನು ಆರಂಭಿಸಿದರು. ಹವಾಮಾನದ ಕುರಿತ ವಿಶ್ವಸಂಸ್ಥೆಯ ವಾರ್ಷಿಕ ಅಧಿವೇಶನ ಈ ಬಾರಿ ಈಜಿಪ್ಟ್ ನ ಶರ್ಮ್ ಎಲ್ ಶೇಕ್ ನ ನಡೆಯುತ್ತಿದ್ದು 200ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.







