ಮೈಸೂರಿನಲ್ಲಿ 100 ಅಡಿ ಎತ್ತರದ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ: ಶಾಸಕ ತನ್ವೀರ್ ಸೇಠ್

ಮೈಸೂರು,ನ.10: 'ಮೈಸೂರಿನಲ್ಲಿ ಟಿಪ್ಪು ಸುಲ್ತಾನರ (Tipu Sultan) 100 ಅಡಿ ಎತ್ತರದ ಪ್ರತಿಮೆ ನಿರ್ಮಿಸಲಾಗುವುದು' ಎಂದು ಶಾಸಕ ತನ್ವೀರ್ ಸೇಠ್ ಘೋಷಿಸಿದ್ದಾರೆ.
ನಗರದ ರಾಜೀವ್ ನಗರ ಅಲ್ ಬದರ್ ಮೈದಾನದಲ್ಲಿ ಗುರುವಾರ ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷಗಳು ಮತ್ತು ರೈತಸಂಘ ಮತ್ತಿತರ ಸಂಘಟನೆಗಳು ಒಟ್ಟಾಗಿ ನಡೆಸಿದ ಕನ್ನಡ ರಾಜ್ಯೋತ್ಸವ ಮತ್ತು ಟಿಪ್ಪು ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
''ಇಸ್ಲಾಮ್ ಧರ್ಮದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶವಿಲ್ಲ. ಇದ್ದಿದ್ದರೇ ಮನೆಗೊಂದರಂತೆ ಟಿಪ್ಪು ಪ್ರತಿಮೆ ನಿರ್ಮಾಣವಾಗುತ್ತಿತ್ತು. ನಮ್ಮನ್ನು ಒಗ್ಗಟ್ಟಾಗಿಸುವ ಶಕ್ತಿ ಟಿಪ್ಪು ಹೆಸರಿಗಿದೆ. ಇಂದು ವಿವಿಧ ಪಕ್ಷಗಳಲ್ಲಿರುವ ಒಂದೇ ಸಮುದಾಯದ ಮುಖಂಡರು ಟಿಪ್ಪು ಹೆಸರಲ್ಲಿ ಒಂದಾಗಿರುವುದೇ ಇದಕ್ಕೆ ಸಾಕ್ಷಿ. ಟಿಪ್ಪು ಹೆಸರಿಗೆ ಅನೇಕ ಅಪಚಾರಗಳನ್ನು ಮಾಡಲಾಗುತ್ತಿದೆ. ಸುಳ್ಳು ಕತೆಗಳನ್ನು ಸೃಷ್ಟಿಸಿ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಟಿಪ್ಪು ಅಭಿಮಾನಿಗಳು, ನಮ್ಮ ಸಮುದಾಯ ಎಲ್ಲವನ್ನೂ ಮೌನವಾಗಿ ಸಹಿಸುತ್ತಿದೆ. ಕಾಲ ಬಂದಾಗ ಅದಕ್ಕೆ ಸ್ಪಷ್ಟ ಉತ್ತರ ನೀಡುತ್ತೇವೆ'' ಎಂದರು.
ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ''ಟಿಪ್ಪು ಎಕ್ಸ್ ಪ್ರೆಸ್ ರೈಲಿಗೆ ನಾವು ಬೇಕಂತಲೇ ಟಿಪ್ಪು ಹೆಸರನ್ನು ತೆಗೆದಿದ್ದೇವೆ. ಟಿಪ್ಪು ಏನು ಮೈಸೂರಿನವರಾ? ಎಂದು ಹೇಳಿದ್ದ ಸಂಸದ ಪ್ರತಾಪ್ ಸಿಂಹ ಏನು ಮೈಸೂರಿವರಾ? ಎಂದು ತಿರುಗೇಟು ನೀಡಿದರು. ದೂರದ ಸಕಲೇಶಪುರದಿಂದ ಬಂದು ಸ್ವಂತ ಪರಿಶ್ರಮದಿಂದ ರಾಜಕಾರಣ ಮಾಡಿಲ್ಲ. ಇಲ್ಲಿ ಮೋದಿ ಹೆಸರೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ'' ಎಂದು ಕಿಡಿ ಕಾರಿದರು.
''ಟಿಪ್ಪು ಸುಲ್ತಾನರ ಚರಿತ್ರೆಯನ್ನು ಅವರು ಸರಿಯಾಗಿ ಓದಿಲ್ಲ. ಅಂದಿನ ಟಿಪ್ಪು ಆಳ್ವಿಕೆಯಲ್ಲಿ ಬೇರೆ ಬೇರೆ ದೇಶಗಳ ಜಿಡಿಪಿ ಗಿಂತಾ ಮೈಸೂರು ರಾಜ್ಯದ ಜಿಡಿಪಿ ಐದು ಪಟ್ಟು ಹೆಚ್ಚಿತ್ತು. ತನ್ನ ರಾಜ್ಯದಲ್ಲಿ ಪಾನ ನಿಷೇಧ ಮಾಡಿದ ಜಗತ್ತಿನ ಮೊಟ್ಟ ಮೊದಲ ದೊರೆ ಟಿಪ್ಪು ಸುಲ್ತಾನರು. 35 ಸಾವಿರ ಕೆರೆ ಕಟ್ಟೆಗಳನ್ನು ಕಟ್ಟಿಸಿದ್ದಾರೆ. ಅವರ ಒಟ್ಟು ರಾಜ್ಯದಲ್ಲಿ ಶೇ.40 ರಷ್ಟು ಭೂ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿತ್ತು ಎಂದರು. ಪ್ರತಾಪ್ ಸಿಂಹ ಮೊದಲು ಆರೆಸ್ಸೆಸ್ ನವರಾದ ಭಗವಾನ್ ಎಸ್.ಗಿದ್ವಾನಿ ಬರೆದಿರುವ ದಿ ಸ್ವಾರ್ಡ್ ಆಫ್ ಟಿಪ್ಪು ಸುಲ್ತಾನ್ ಕೃತಿಯನ್ನು ಓದಲಿ'' ಎಂದರು.
ಇದನ್ನೂ ಓದಿ: ಶತ್ರುಗಳ ಮುಂದೆ ಮಂಡಿಯೂರದ ಜಗತ್ತಿನ ಏಕೈಕ ನಾಯಕ ಟಿಪ್ಪು ಸುಲ್ತಾನ್: BJP ಎಂಎಲ್ಸಿ ಎಚ್.ವಿಶ್ವನಾಥ್
ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಅಯ್ಯೂಬ್ ಖಾನ್, ಪುಷ್ಪಲತಾ ಜಗನ್ನಾಥ್, ಪಾಲಿಕೆ ಸದಸ್ಯರಾದ ಆಫ್ತಾಬ್, ಸುಹೇಲ್ ಬೇಗ್, ಮಾಜಿ ಸದಸ್ಯ ಶೌಕತ್ ಪಾಷ, ಎಮ್.ಎಫ್.ಕಲೀಂ, ಪ್ರೊ.ಪಿ.ನಂಜರಾಜ ಅರಸು, ಪ್ರೊ.ಮಹೇಶ್ ಚಂದ್ರ ಗುರು, ಎಂ.ಕಲೀಂ ಅಹಮದ್, ಮೌಲಾನಾ ಅರ್ಷದ್ ಸಾಹೇಬ್, ಅಬ್ದುಲ್ ಖಾದರ್ ಷಾಹೀದ್ ಮುಂತಾದವರು ಇದ್ದರು.







