ವಿದೇಶಿ ಕಾಯ್ದೆಯಡಿ ಬಂಧನ; ಮಹಿಳೆಗೆ ಹೈಕೋರ್ಟ್ ನಿಂದ ಜಾಮೀನು

ಬೆಂಗಳೂರು, ನ.10: ಕಳೆದ ವರ್ಷ ಉತ್ತರ ಕನ್ನಡ ಜಿಲ್ಲೆಯಲ್ಲಿ ಪಾಕಿಸ್ತಾನದ ಪ್ರಜೆ ಎಂಬ ಆರೋಪದಡಿ ಬಂಧನಕ್ಕೆ ಒಳಗಾಗಿದ್ದ ಮಹಿಳೆಗೆ ಹೈಕೋರ್ಟ್ (Karnataka High Court), ಜಾಮೀನು ಮಂಜೂರು ಮಾಡಿದೆ.
ಬಂಧನಕ್ಕೆ ಒಳಗಾಗಿದ್ದ ಖತೀಜಾ ಮೆಹರೀನ್ ರುಕ್ನುದ್ದೀನ್ ಎಂಬ ಮಹಿಳೆ ತನ್ನ ಎರಡೂವರೆ ವರ್ಷದ ಮಗುವಿನೊಂದಿಗೆ 16 ತಿಂಗಳಿನಿಂದ ಕಾರವಾರದ ಜೈಲಿನಲ್ಲಿದ್ದಾರೆ.
ಕಳೆದ ವರ್ಷ ಜೂನ್‍ನಲ್ಲಿ ಭಟ್ಕಳದಲ್ಲಿ ಪೊಲೀಸರು ದಾಳಿ ಮಾಡಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ 2014ರಿಂದ ಭಟ್ಕಳದಲ್ಲಿ ನೆಲೆಸಿದ್ದ ಪಾಕಿಸ್ತಾನಿ ಮಹಿಳೆ ಎಂದು ಹೇಳಲಾಗುವ ಖತೀಜಾ ಮೆಹರೀನ್‍ನನ್ನು ಬಂಧಿಸಲಾಗಿತ್ತು. ಜೊತೆಗೆ ಆಕೆಯ ಹೆಸರಿನಲ್ಲಿದ್ದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಮತ್ತಿತರ ನಕಲಿ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಇದನ್ನೂ ಓದಿ>>> ವಶಪಡಿಸಿಕೊಂಡ ವಾಹನಗಳನ್ನು ಠಾಣೆ ಮುಂದೆ ನಿಲ್ಲಿಸುವಂತಿಲ್ಲ, ಷರತ್ತು ವಿಧಿಸಿ ಕೂಡಲೇ ಬಿಡುಗಡೆ ಮಾಡಬೇಕು: ಹೈಕೋರ್ಟ್
ಜಾಮೀನು ಕೋರಿ ಹೈಕೋರ್ಟ್‍ಗೆ ಮೊರೆ ಹೋಗಿದ್ದ ಮಹಿಳೆಯು, ನಾನು ಕಳೆದ 16 ತಿಂಗಳಿನಿಂದ ಬಂಧನದಲ್ಲಿದ್ದೇನೆ. ನಾನು 1998ರಲ್ಲಿ ಭಟ್ಕಳದಲ್ಲಿ ಜನಿಸಿದ್ದು, ನೌನಿಹಾಲ್ ಸೆಂಟ್ರಲ್ ಶಾಲೆಯಲ್ಲಿ ಓದಿದ್ದೇನೆ. ನಾನು ಬಂಧನದಲ್ಲಿದ್ದಾಗ 2022ರ ಎಪ್ರಿಲ್ 22ರಂದು ಪತಿ ಜಾವೇದ್ ಮೃತಪಟ್ಟಿದ್ದಾರೆ. ನನಗೆ ಮೂವರು ಮಕ್ಕಳಿದ್ದಾರೆ. ಕೊನೆಯ ಮಗು ನನ್ನೊಂದಿಗೆ ಜೈಲಿನಲ್ಲಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಳು.
ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿದಾರರ ವಿರುದ್ಧ ಇದುವರೆಗೆ ಯಾವುದೇ ಪ್ರಾಥಮಿಕ ಪ್ರಕರಣ ದಾಖಲಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಕೇವಲ ಅನುಮಾನದ ಮೇಲೆ ನ್ಯಾಯಾಂಗ ಬಂಧನದಲ್ಲಿರಿಸಬಾರದು. ಈಕೆ ಜಾಮೀನಿನ ಮೇಲೆ ಬಿಡುಗಡೆಯಾಗಲು ಅರ್ಹಳು ಎಂದು ತಿಳಿಸಿದೆ. ವಿದೇಶಿ ಕಾಯ್ದೆಯಡಿ ಮಹಿಳೆಯನ್ನು ಬಂಧಿಸಲಾಗಿದೆ.
ಈ ಕಾಯ್ದೆಯಡಿ ಐದು ವರ್ಷಗಳವರೆಗೆ ಗರಿಷ್ಠ ಜೈಲು ಶಿಕ್ಷೆ ಮತ್ತು ಐಪಿಸಿ ಅಡಿಯಲ್ಲಿ ಆಕೆಯ ವಿರುದ್ಧದ ಆರೋಪಗಳು ಗರಿಷ್ಠ 7 ವರ್ಷಗಳ ಶಿಕ್ಷೆಯನ್ನು ಮಾತ್ರ ಹೊಂದಿದೆ ಎಂಬುದನ್ನು ಹೈಕೋರ್ಟ್ ಗಮನಿಸಿದ್ದು, ಈಗಾಗಲೇ ಆರೋಪಿ 1 ವರ್ಷ 4 ತಿಂಗಳಿಗಿಂತ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅಪರಾಧ ಸಾಬೀತಾದರೂ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗದ ಕಾರಣ ದೀರ್ಘಾವಧಿಯ ಸೆರೆವಾಸ ಅಗತ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.







