ಝಾರ್ಖಂಡ್: ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು 77%ಕ್ಕೆ ಹೆಚ್ಚಿಸುವ ಮಸೂದೆ ಅಂಗೀಕಾರ

ರಾಂಚಿ, ನ. 11: ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗಗಳು ಮತ್ತು ಆರ್ಥಿಕ ದುರ್ಬಲ ವರ್ಗಗಳಿಗೆ ರಾಜ್ಯ ಸರಕಾರದ ಉದ್ಯೋಗಗಳಲ್ಲಿ 77% ಮೀಸಲಾತಿ ನೀಡುವ ಮಸೂದೆಯೊಂದನ್ನು ಝಾರ್ಖಂಡ್ ವಿಧಾನಸಭೆ(Jharkhand Legislative Assembly) ಶುಕ್ರವಾರ ಅಂಗೀಕರಿಸಿದೆ.
ರಾಜ್ಯ ಸಚಿವ ಸಂಪುಟವು ಈ ಮಸೂದೆಯನ್ನು ಸೆಪ್ಟಂಬರ್ 14ರಂದು ಅಂಗೀಕರಿಸಿತ್ತು ಹಾಗೂ ಶುಕ್ರವಾರ ನಡೆದ ವಿಧಾನಸಭೆಯ ವಿಶೇಷ ಅಧಿವೇಶನವು ಮಸೂದೆಗೆ ಅಂಗೀಕಾರ ನೀಡಿತು.
ಪ್ರಸಕ್ತ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗಾಗಿ ರಾಜ್ಯ ಸರಕಾರದ ಉದ್ಯೊಗಗಳಲ್ಲಿ 60% ಮೀಸಲಾತಿ ಇದೆ. ನೂತನ ಮಸೂದೆಯು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು 26%ದಿಂದ 28%ಕ್ಕೆ, ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು 14%ದಿಂದ 27%ಕ್ಕೆ ಮತ್ತು ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು 10%ದಿಂದ 12%ಕ್ಕೆ ಹೆಚ್ಚಿಸುತ್ತದೆ.
ಈ ಮಸೂದೆಯನ್ನು ಸಂವಿಧಾನದ ಒಂಭತ್ತನೇ ಶೆಡ್ಯೂಲ್ಗೆ ಸೇರಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡುವುದಾಗಿ ರಾಜ್ಯ ಸರಕಾರ ತಿಳಿಸಿದೆ. ಈ ಉಪಕ್ರಮವು ಮಸೂದೆಯನ್ನು ನ್ಯಾಯಾಂಗ ಪರಿಶೀಲನೆಯಿಂದ ರಕ್ಷಿಸುತ್ತದೆ.
ಬಿಜೆಪಿಯ ಪ್ರತಿಭಟನೆಯ ನಡುವೆಯೇ ಈ ಮಸೂದೆಯನ್ನು ವಿಧಾನಸಭೆ ಅಂಗೀಕರಿಸಿತು.
ನಾಗರಿಕರ ಮೂಲ ವಾಸ್ತವ್ಯ ನಿರ್ಧಾರಕ್ಕೆ 1932ರ ಭೂ ದಾಖಲೆಗಳು ಆಧಾರ?
ರಾಜ್ಯದಲ್ಲಿ ನಾಗರಿಕರ ಮೂಲ ವಾಸ್ತವ್ಯ (ಡೋಮಿಸೈಲ್)ವನ್ನು ನಿರ್ಧರಿಸಲು 1932ರ ಭೂ ದಾಖಲೆಗಳನ್ನು ಆಧಾರವಾಗಿ ಪರಿಗಣಿಸುವ ಇನ್ನೊಂದು ಮಸೂದೆಯನ್ನೂ ಝಾರ್ಖಂಡ್ ವಿಧಾನಸಭೆ ಅಂಗೀಕರಿಸುವ ನಿರೀಕ್ಷೆಯಿದೆ ಎಂದು ಎನ್ಡಿಟಿವಿ (NDTV)ವರದಿ ಮಾಡಿದೆ.
1932 ಅಥವಾ ಅದಕ್ಕಿಂತಲೂ ಹಿಂದಿನ ಭೂ ದಾಖಲೆಗಳಲ್ಲಿ ಹೆಸರುಗಳಿರುವ ವ್ಯಕ್ತಿಗಳ ವಂಶಸ್ಥರಿಗೆ ರಾಜ್ಯದಲ್ಲಿ ಮೂಲ ವಾಸ್ತವ್ಯ ಸ್ಥಾನಮಾನ ನೀಡಲು ಈ ಮಸೂದೆಯು ಅವಕಾಶ ನೀಡುತ್ತದೆ.
ಸುರಕ್ಷಾ ಕವಚ: ಮುಖ್ಯಮಂತ್ರಿ
ಈ ಮಸೂದೆಯು ನಾಗರಿಕರಿಗೆ ‘ಸುರಕ್ಷಾ ಕವಚ’ವಾಗಿದೆ ಎಂದು ಮಸೂದೆಯು ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಬಳಿಕ ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದರು.
ಮುಖ್ಯಾಂಶಗಳು
*ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗಗಳು ಮತ್ತು ಆರ್ಥಿಕ ದುರ್ಬಲ ವರ್ಗಗಳಿಗೆ ರಾಜ್ಯ ಸರಕಾರದ ಉದ್ಯೋಗಗಳಲ್ಲಿನ ಮೀಸಲಾತಿ 60%ದಿಂದ 77%ಕ್ಕೆ ಏರಿಕೆ.
*ಪರಿಶಿಷ್ಟ ಪಂಗಡಗಳ ಮೀಸಲಾತಿ 26%ದಿಂದ 28%ಕ್ಕೆ, ಇತರ ಹಿಂದುಳಿದ ವರ್ಗಗಳ ಮೀಸಲಾತಿ 14%ದಿಂದ 27%ಕ್ಕೆ ಮತ್ತು ಪರಿಶಿಷ್ಟ ಜಾತಿಗಳ ಮೀಸಲಾತಿ 10%ದಿಂದ 12%ಕ್ಕೆ ಏರಿಕೆ.
*ಈ ಮಸೂದೆಯನ್ನು ಸಂವಿಧಾನದ ಒಂಭತ್ತನೇ ಶೆಡ್ಯೂಲ್ಗೆ ಸೇರಿಸುವಂತೆ ಕೇಂದ್ರ ಸರಕಾರಕ್ಕೆ ರಾಜ್ಯದಿಂದ ಮನವಿ. ಇದು ಮಸೂದೆಯನ್ನು ನ್ಯಾಯಾಂಗ ಪರಿಶೀಲನೆಯಿಂದ ರಕ್ಷಿಸುತ್ತದೆ.
*ಮೀಸಲಾತಿ ಹೆಚ್ಚಳ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ.







