ಚಳಿಗಾಲದಲ್ಲಿ ತೀವ್ರ ಆರ್ಥಿಕ ಹಿಂಜರಿತದೆಡೆಗೆ ಜಾರಲಿರುವ ಯುರೋಪ್: ಇಯು ಎಚ್ಚರಿಕೆ

ಬ್ರುಸೆಲ್ಸ್,ನ.11: ಈ ಚಳಿಗಾಲದಲ್ಲಿ ಯುರೋ(Euro) ವಲಯವು ತೀವ್ರ ಆರ್ಥಿಕ ಹಿಂಜರಿತವನ್ನು ಕಾಣಲಿದೆಯೆಂದು ಯುರೋಪ್ (Europe)ಒಕ್ಕೂಟ ಶುಕ್ರವಾರ ಎಚ್ಚರಿಕೆ ನೀಡಿದೆ. ಉಕ್ರೇನ್ ಮೇಲೆ ರಶ್ಯ(Russia over Ukraine)ದ ಆಕ್ರಮದಿಂದಾಗಿ ಉಂಟಾಗಿರುವ ಆರ್ಥಿಕ ಆಘಾತದಿಂದಾಗಿ ಯುರೋಪ್ ತೀವ್ರವಾಗಿ ಬಾಧಿತವಾಗಿದೆ. ಇದೇ ವೇಳೆ ಗಗನಕ್ಕೇರಿರುವ ಇಂಧನ ಬೆಲೆಯು ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಯುರೋಪ್ಗೆ ಉಪ್ಪಿನ ಮೇಲೆ ಗಾಯ ಸುರಿದಂತಾಗಿದೆ.
2023ರ ಮೊದಲ ತ್ರೈಮಾಸಿಕದವರೆಗೂ ಯುರೋಪ್ ವಲಯದಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ಕುಗ್ಗುವಿಕೆಯು ಕಂಡುಬರಲಿದೆ. ಬೇಸಿಗೆಯ ವೇಳೆಗಷ್ಟೇ ಆರ್ಥಿಕ ಬೆಳವಣಗೆಯು ಮರಳುವ ಸಾಧ್ಯತೆಯಿದೆ’’ ಯುರೋಪ್ ಒಕ್ಕೂಟದ ಆರ್ಥಿಕ ಆಯೋಗವು ತಿಳಿಸಿದೆ. ಯುರೋಪ್ ವಲಯದ ರಾಷ್ಟ್ರಗಳ ಆರ್ಥಿಕ ಬೆಳವಣಿಗೆಯು 2023ರಲ್ಲಿ 0.3 ಶೇಕಡಕ್ಕೆ ತಲುಪಲಿದೆಯೆಂದು ಅದು ಹೇಳಿದೆ.
ಯುರೋಪ್ ಒಕ್ಕೂಟದ ಅತಿ ದೊಡ್ಡ ಆರ್ಥಿಕತೆಯ ದೇಶವಾದ ಜರ್ಮನಿಯು, ಇತರ ಸದಸ್ಯ ರಾಷ್ಟ್ರಗಳಿಂಗಿಂತಲೂ ಅತ್ಯಂತ ಕೆಟ್ಟ ಆರ್ಥಿಕ ಸ್ಥಿತಿಯನ್ನು ಎದುರಿಸಲಿದೆ ಹಾಗೂ ಅದರ ಆರ್ಥಿಕತೆಯು ಮುಂದಿನ ವರ್ಷ 0.6 ಶೇಕಡಕ್ಕೆ ಕುಗ್ಗಲಿದೆಯೆಂದು ಅದು ತಿಳಿಸಿದೆ.
ಗಗನಕ್ಕೇರುತ್ತಿರುವ ಇಂಧನ ಬೆಲೆಗಳು, ವ್ಯಾಪಕವಾದ ಹಣದುಬ್ಬರವು ಯುರೋಪ್ನ ಆರ್ಥಿಕತೆಯನ್ನು ಬಲಿತೆಗೆದುಕೊಳ್ಳುತ್ತಿದೆಯೆಂದು ಯುರೋಪ್ ಒಕ್ಕೂಟದ ಆರ್ಥಿಕ ಆಯುಕ್ತ ಪಾವೊಲೊ ಜೆಂಟಿಲೋನಿ (Paolo Gentiloni)ತಿಳಿಸಿದ್ದಾರೆ.