ಶಾಸಕ ವೇದವ್ಯಾಸ ಕಾಮತ್ ರಿಂದ ಆಹಾರ ಸುರಕ್ಷಾ ತರಬೇತಿ ಕಾರ್ಯಕ್ರಮ ರದ್ದು: ಆರೋಪ

ಮಂಗಳೂರು: ಭಾರತೀಯ ಆಹಾರ ಸೇವೆ ಮತ್ತು ಸುರಕ್ಷತಾ ಪ್ರಾಧಿಕಾರದ ನಿರ್ದೇಶನದಂತೆ ಆಹಾರ ಉತ್ಪನ್ನ ಮಾರಾಟ ಮಾಡುವ ಬೀದಿಬದಿ ವ್ಯಾಪಾರಿಗಳಿಗೆ ಮಂಗಳೂರು ಮಹಾನಗರ ಪಾಲಿಕೆಯು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮವನ್ನು ಶಾಸಕ ವೇದವ್ಯಾಸ ಕಾಮತ್ ರಾಜಕೀಯ ಕಾರಣಕ್ಕೆ ರದ್ದು ಮಾಡಿಸಿದ್ದಾರೆ ಎಂದು ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃಧ್ಧಿ ಸಂಘ ಆರೋಪಿಸಿದೆ.
ಬೀದಿಬದಿ ವ್ಯಾಪಾರಸ್ಥರ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ 2014ರಂತೆ ಬೀದಿಬದಿ ವ್ಯಾಪಾರಿಗಳಿಗೆ ಕಾನೂನಿನ ಮಾನ್ಯತೆ ದೊರಕಿದೆ. ಅದರಂತೆ ಮಹಾನಗರ ಪಾಲಿಕೆಯು 668 ಮಂದಿಗೆ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ನೀಡಿದೆ. ಟೋಲ್ ಹೋರಾಟದಲ್ಲಿ ಬೀದಿಬದಿ ವ್ಯಾಪಾರಿಗಳು ಭಾಗವಹಿಸಿದ್ದಾರೆ ಎಂಬ ಕಾರಣಕ್ಕೆ ಆಹಾರ ಸುರಕ್ಷತೆ ತರಬೇತಿಯನ್ನು ಶಾಸಕ ವೇದವ್ಯಾಸ್ ಕಾಮತ್ ರದ್ದುಗೊಳಿಸಿದ್ದಾರೆ. ಕೇಂದ್ರ ಮಾರುಕಟ್ಟೆ ನಿರ್ಮಾಣ ಆಗುವ ಸ್ಥಳದಲ್ಲಿ ತಗಡು ಶೀಟುಗಳನ್ನು ಹಾಕಿಸಿ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಟೋಲ್‌ಗೇಟ್ ಅಕ್ರಮ ಮತ್ತು ನಿಯಮ ಬಾಹಿರ ಎಂದು ಸರಕಾರವೇ ಹೇಳಿರುವಾಗ ಅದರ ವಿರುದ್ಧ ಬೀದಿಬದಿ ವ್ಯಾಪಾರಿಗಳು ಭಾಗವಹಿಸಿದರೆ ತಪ್ಪೇನು? ಎಂದು ಸಂಘ ಪ್ರಶ್ನಿಸಿದೆ.
ಬೀದಿ ಬದಿ ವ್ಯಾಪಾರಿಗಳಿಗೆ ಕಾನೂನಿನ ಮೂಲಕ ಸಿಕ್ಕಿರುವ ಅವಕಾಶಗಳನ್ನು ತಪ್ಪಿಸಲು ಶಾಸಕರೊಂದಿಗೆ ಪಾಲಿಕೆಯ ಅಧಿಕಾರಿಗಳು ಕೈಜೋಡಿಸುತ್ತಿರುವುದು ಖಂಡನೀಯ. ವೇದವ್ಯಾಸ ಕಾಮತ್ ಇದೇ ರೀತಿ ಮುಂದುವರಿದರೆ ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃಧ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಎಚ್ಚರಿಸಿದ್ದಾರೆ.