ಶಿವಾಲಯಗಳನ್ನು ವೈಷ್ಣವ ದೇವಸ್ಥಾನಗಳಾಗಿ ಸಂಪ್ರದಾಯಕ್ಕೆ ವಿರುದ್ಧವಾಗಿ ಬದಲಾವಣೆ: ಶೈವಕ್ಷೇತ್ರ ಸಂರಕ್ಷಣಾ ವೇದಿಕೆ ಆರೋಪ
"ಮಾಧ್ವರ ಸಂಪ್ರದಾಯ ವಿರೋಧಿ ಚಟುವಟಿಕೆ ತಡೆಗೆ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಪೂರಕ, ಅದನ್ನು ಹಿಂಪಡೆಯಬಾರದು"

ಮಂಗಳೂರು, ನ.12: ಹಿಂದು ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆ ಅಧೀನದ ದೇವಸ್ಥಾನಗಳಲ್ಲಿ ಅನುಮತಿ ಇಲ್ಲದೆ ಜಯಂತಿಗಳ ಆಚರಣೆ, ಫಲಕ ಅಳವಡಿಕೆ, ಮುದ್ರಾಧಾರಣೆ, ಆಗಮ ಶಾಸಕ್ಕೆ ವಿರುದ್ಧವಾಗಿ ಧಾರ್ಮಿಕ ಆಚರಣೆ ಸಲ್ಲದು ಎಂಬ ಸುತ್ತೋಲೆ ಹಿಂದು ಸಾಮರಸ್ಯಕ್ಕೆ ಪೂರಕವಾಗಿದೆ. ಈ ಸುತ್ತೋಲೆಯನ್ನು ಸರಕಾರ ಯಾವುದೇ ಕಾರಣಕ್ಕೂ ಹಿಂಪಡೆಯಬಾರದು ಎಂದು ದಕ್ಷಿಣ ಕನ್ನಡ ಜಿಲ್ಲೆ ಶೈವಕ್ಷೇತ್ರ ಸಂರಕ್ಷಣಾ ವೇದಿಕೆ ಒತ್ತಾಯಿಸಿದೆ.
ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳಲ್ಲಿ ಆಯಾಯ ದೇವಾಲಯಗಳ ಆಗಮ ಶಾಸ ಪದ್ಧತಿಗೆ, ಸಂಪ್ರದಾಯಗಳಿಗೆ ವಿರುದ್ಧವಾಗಿ ಧಾರ್ಮಿಕ ಆಚರಣೆ ನಡೆಸುವುದು, ಮುದ್ರಾಧಾರಣೆ ಮಾಡುವುದು, ಜಯಂತಿಗಳನ್ನು ಆಚರಿಸುವುದು, ಫಲಕ ಅಳವಡಿಸುವುದು ಸರಿಯಲ್ಲ ಎಂದು ಧಾರ್ಮಿಕ ದತ್ತಿ ಇಲಾಖೆ ನ.2ರಂದು ಹೊರಡಿಸಿರುವ ಸುತ್ತೋಲೆ ಕಾನೂನುಬದ್ಧವಾಗಿದೆ. ಇದು ಧಾರ್ಮಿಕ ಪರಿಷತ್‌ನ ಕಾನೂನುಬದ್ಧ ನಿರ್ಣಯವಾಗಿದೆ. ಈ ಸುತ್ತೋಲೆಯನ್ನು ವಾಪಸ್ ಪಡೆಯಲು ಸರಕಾರಕ್ಕೆ ಒತ್ತಡ ಹೇರಲಾಗುತ್ತಿದೆ. ಒಂದು ಪಂಗಡದ ಒತ್ತಡಕ್ಕೆ ಮಣಿದು ಸುತ್ತೋಲೆ ಹಿಂಪಡೆದರೆ ಅದು ಕಾನೂನುಬಾಹಿರ ಹಾಗೂ ಹಿಂದು ಐಕ್ಯಕ್ಕೆ ಅಡ್ಡಿಯಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲೆ ಶೈವಕ್ಷೇತ್ರ ಸಂರಕ್ಷಣಾ ವೇದಿಕೆ ಸಂಸ್ಥಾಪಕ ನಿರ್ದೇಶಕ ಶ್ರೀನಾಥ್ ಟಿ.ಎಸ್. ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಹಿಂದು ಧಾರ್ಮಿಕ ದತ್ತಿ ಇಲಾಖೆ ಅಧೀನದ ದೇವಸ್ಥಾನಗಳು ಹಿಂದು ಸಮಾಜಕ್ಕೆ ಸೇರಿದ್ದು, ಹೊರತು ಒಂದು ಪಂಗಡಕ್ಕೆ ಸೇರಿದ್ದಲ್ಲ. ದ.ಕ., ಉಡುಪಿಯ ದೇವಸ್ಥಾನಗಳಲ್ಲಿ ಯಾವ ರೀತಿ ಪೂಜೆ, ಧಾರ್ಮಿಕ ಆಚರಣೆ ನಡೆಸಬೇಕು ಎಂಬ ಬಗ್ಗೆ ದಿಟ್ಟಂ ದಾಖಲೆ ಇದೆ. ಅದರ ಹೊರತಾದ ಆಚರಣೆಗೆ ಧಾರ್ಮಿಕ ಪರಿಷತ್ ಒಪ್ಪಿಗೆ ಬೇಕು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಯಾವುದೇ ಧಾರ್ಮಿಕ ದತ್ತಿ ದೇವಸ್ಥಾನಗಳಲ್ಲಿ ಮುದ್ರಾಧಾರಣೆ, ಮಧ್ವಜಯಂತಿ ಆಚರಿಸಲು ದಿಟ್ಟಂ ದಾಖಲಾತಿ ಇಲ್ಲ. ಕಟೀಲು ದೇವಸ್ಥಾನದಲ್ಲಿ ಮೂಲ ದಾಖಲೆ, ಸಂಪ್ರದಾಯದ ಪಾಶುಪತ ಶೈವಾಗಮಕ್ಕೆ ವಿರುದ್ಧವಾಗಿ ಮಧ್ವಾಚಾರ್ಯರ ತತ್ವ ಸಿದ್ದಾಂತದಲ್ಲಿ ಪೂಜೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಶಿವಾಲಯಗಳನ್ನು ವೈಷ್ಣವ ದೇವಸ್ಥಾನಗಳಾಗಿ ಸಂಪ್ರದಾಯಕ್ಕೆ ವಿರುದ್ಧವಾಗಿ ಬದಲಾಯಿಸಲಾಗುತ್ತಿದೆ. ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಮಹಾವಿಷ್ಣು ಗುಡಿ ನಿರ್ಮಿಸಲಾಗಿದೆ. ಉಡುಪಿ ಅನಂತೇಶ್ವರ ಶಿವ ದೇವಸ್ಥಾನದಲ್ಲಿ ದೇವರನ್ನು ಪರಶುರಾಮ ಎಂದು ಬದಲಾಯಿಸಲಾಗಿದೆ. ಮಾಧ್ವರ ಇಂತಹ ಸಂಪ್ರದಾಯ ವಿರೋಧಿ ಚಟುವಟಿಕೆಗಳು ಭಕ್ತರಿಗೆ ನೋವುಂಟು ಮಾಡಿದೆ. ಇಂತಹ ಸಂಪ್ರದಾಯ ವಿರೋಧಿ ಚಟುವಟಿಕೆ ತಡೆಯಲು ಸರಕಾರದ ಈಗಿನ ಸುತ್ತೋಲೆ ಕಾನೂನುಬದ್ಧ ಪೂರಕ ಸುತ್ತೋಲೆಯಾಗಿದೆ ಎಂದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶಿವರಾತ್ರಿ ಆಚರಣೆಗೆ ಸಂಬಂಧಿಸಿ ಮಾಧ್ವ ಪರ ವ್ಯಕ್ತಿಗಳು ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದ ಪ್ರಕರಣದಲ್ಲಿ ದೇವಸ್ಥಾನದಲ್ಲಿ ದಿಟ್ಟಂ ದಾಖಲೆ ಅಧಿಕೃತ ಎಂದು ಹೈಕೋರ್ಟ್ ಹೇಳಿದೆ. ಈಗಿನ ಸುತ್ತೋಲೆ ರದ್ದಾದರೆ ಅದು ನ್ಯಾಯಂಗ ನಿಂದನೆ ಆಗುತ್ತದೆ. ಸುತ್ತೋಲೆ ರದ್ದುಪಡಿಸಿದರೆ ಎಲ್ಲ ಶಿವ, ಶಿವಪರಿವಾರ ದೇವಸ್ಥಾನಗಳಲ್ಲಿ ಶೈವಾಗಮ ಪದ್ಧತಿಯಲ್ಲಿ ಪೂಜೆ ನಡೆಸಬೇಕು. ಹಿಂದು ಸಮಾಜದ ಎಲ್ಲ ದಾರ್ಶನಿಕರ ಜಯಂತಿ ಆಚರಣೆಗೆ ಅವಕಾಶ ನೀಡಬೇಕು, ಶೈವ ದೇವಸ್ಥಾನದಲ್ಲಿ ವಿಷ್ಣು ಸಾನಿಧ್ಯ ಸ್ಥಾಪಿಸಿದರೆ, ವಿಷ್ಣು ದೇವಸ್ಥಾನದಲ್ಲಿ ಶಿವ ಸಾನಿಧ್ಯ ಸ್ಥಾಪಿಸಲು ಅವಕಾಶ ನೀಡಬೇಕು ಎಂದು ಧಾರ್ಮಿಕ ದತ್ತಿ ಇಲಾಖೆಯನ್ನು ಅವರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವೇದಿಕೆ ಸಹಾಯಕ ಕಾರ್ಯದರ್ಶಿ ಕರುಣಾಕರ ಬಿಳಿಮಲೆ ಉಪಸ್ಥಿತರಿದ್ದರು.