ನ.14ರಂದು ಯೆನೆಪೊಯ ಕಾಲೇಜು ಕಟ್ಟಡ ಉದ್ಘಾಟನೆ

ಮಂಗಳೂರು, ನ. 12: ಯೆನೆಪೊಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯದ ಘಟಕವಾದ ಯೆನೆಪೊಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ 2017ರಲ್ಲಿ ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ಶಿಕ್ಷಣ ಆರಂಭಿಸಿದೆ. ಇದೀಗ ಸಂಸ್ಥೆಯು ನ.14ರಂದು ಹೊಸ ಕಟ್ಟಡಕ್ಕೆ ಸ್ಥಳಾಂತಗೊಳ್ಳಲಿದೆ ಎಂದು ಪ್ರಾಂಶುಪಾಲ ಡಾ.ಅರುಣ್ ಭಾಗವತ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಕೂಳೂರಿನಲ್ಲಿ ಕಾಲೇಜಿನ ನೂತನ ಕಟ್ಟಡವನ್ನು ಅಂದು ಬೆಳಗ್ಗೆ 9:30ಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಉದ್ಘಾಟಿಸುವರು ಎಂದು ತಿಳಿಸಿದರು.
ಈ ಸಂದರ್ಭ ಆಯೋಜಿಸಲಾಗಿರುವ ರಕ್ತದಾನ ಶಿಬಿರವನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸುವರು. ಶಾಸಕ ಡಾ ಭರತ್ ಶೆಟ್ಟಿ, ಯು.ಟಿ.ಖಾದರ್, ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಉಪ ಆಯುಕ್ತ ಅಂಶು ಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಯೆನೆಪೊಯ ವಿವಿ ಕುಲಪತಿ ಡಾ.ಯೆನೆಪೊಯ ಅಬ್ದುಲ್ಲ ಕುಂಞಿ ಅಧ್ಯಕ್ಷತೆ ವಹಿಸಲಿದ್ದಾರೆ. ಯೆನೆಪೊಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಕುಂಞಿ ಗೌರವ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭ ಯೆನೆಪೊಯ ಶಾಲೆಯ ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಗುವುದು ಎಂದು ಅವರು ಹೇಳಿದರು.
ಡಾ. ಯೆನೆಪೊಯ ಅಬ್ದುಲ್ಲ ಕುಂಞಿಯವರ 75ನೆ ಜನ್ಮ ದಿನಾಚರಣೆ ಅಂಗವಾಗಿ ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಘಟಕಗಳು ರಕ್ತದಾನ ಶಿಬಿರವನ್ನು ಏಕಕಾಲದಲ್ಲಿ ನಡೆಸಲಿವೆ. ಯೆನೆಪೊಯ ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಕೂಳೂರು, ಮುಡಿಪು ಕಿನ್ಯಗಳಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ರಕ್ತದಾನ ನಡೆಯಲಿದೆ ಎಂದು ಡಾ. ಅಶ್ವಿನಿ ಶೆಟ್ಟಿ ಮಾಹಿತಿ ನೀಡಿದರು.
ಯೆನೆಪೊಯ ಫಾರ್ಮಸಿ ಕಾಲೇಜು- ಸಂಶೋಧನಾ ಕೇಂದ್ರದ ಉದ್ಘಾಟನೆ ಯೆನೆಪೊಯ ಪರಿಗಣಿತ ವಿವಿಯ ಅಂಗ ಸಂಸ್ಥೆಯಾದ ಯೆನೆಪೊಯ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ನೂತನವಾಗಿ ನಿರ್ಮಾಣಗೊಂಡ ಕಟ್ಟಡ ಉದ್ಘಾಟನೆ ನ. 14ರಂದು ಸಂಜೆ 3 ಗಂಟೆಗೆ ನಡೆಯಲಿದೆ. ನರಿಂಗಾನದ ಆಯುಷ್ ಕ್ಯಾಂಪಸ್‌ನಲ್ಲಿ ನಿರ್ಮಾಣಗೊಂಡ ಈ ಕಟ್ಟಡ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದ್ದು, ಉದ್ಘಾಟನೆಯನ್ನು ಭಾರತ ಸರಕಾರದ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಸಚಿವ ಶ್ರೀಪಾದ್ ನಾಯಕ್ ನೆರವೇರಿಸುವರು ಎಂದು ಯೆನೆಪೊಯ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಮುಹಮ್ಮದ್ ಗುಲ್ಝಾರ್ ಅಹ್ಮದ್ ಈ ಸಂದರ್ಭ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಯೆನೆಪೊಯ ಆಯುರ್ವೇದ ಕಾಲೇಜಿನ ಆಸ್ಪತ್ರೆ ಕಟ್ಟಡವನ್ನು ದಿ.ವಿಜಯ ಶ್ರೀಪಾದ್ ನಾಯಕ್ ರವರ ನೆನಪಿಗೋಸ್ಕರ ಕೇಂದ್ರ ಸಚಿವರು ಅರ್ಪಣೆ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕುಲಾಧಿಪತಿ ಡಾ. ಯೆನೆಪೊಯ ಅಬ್ದುಲ್ಲಾ ಕುಂಞಿ ವಹಿಸಲಿದ್ದಾರೆ ಎಂದು ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಗುರುರಾಜ ಎಚ್.ತಿಳಿಸಿದು.
ಸುದ್ದಿಗೋಷ್ಠಿಯಲ್ಲಿ ಡಾ. ನಂದೀಶ್, ಡಾ. ಉದಯ ಕುಮಾರ್ ಇರ್ವತ್ತೂರು, ಡಾ. ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.
