ಪುತ್ತೂರು ಕ್ಷೇತ್ರಕ್ಕೆ 1ಸಾವಿರ ಕೋಟಿ ರೂ. ಅನುದಾನ: ಶಾಸಕ ಸಂಜೀವ ಮಠಂದೂರು

ಪುತ್ತೂರು: ತನ್ನ ಶಾಸಕತ್ವದ ಮೊದಲ ವರ್ಷದ ಅವಧಿಯಲ್ಲಿ ಆಗಿನ ಕಾಂಗ್ರೆಸ್- ಜೆಡಿಎಸ್ ಸರಕಾರದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಕೇವಲ ರೂ. 25 ಕೋಟಿ ಅನುದಾನ ಬಂದಿತ್ತು. ಬಿಜೆಪಿ ಸರಕಾರ ಅಧಿಕಾರ ಪಡೆದ ಮೇಲೆ ಈ ಕ್ಷೇತ್ರಕ್ಕೆ ರೂ. 1 ಸಾವಿರ ಕೋಟಿ ಅನುದಾನ ಲಭಿಸಿದೆ. 160 ಕಿ.ಮೀ. ರಸ್ತೆಯನ್ನು ಪುತ್ತೂರು ಕ್ಷೇತ್ರದಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಇದು ಸ್ವಾತಂತ್ರ್ಯಾನಂತರದ 75 ವರ್ಷಗಳಲ್ಲೇ ದೊಡ್ಡ ದಾಖಲೆಯಾಗಿದೆ. ಕ್ಷೇತ್ರದ ಅಭಿವೃದ್ಧಿ ಸಹಿಸದವರು ಸುಮ್ಮನೇ ಅಪಪ್ರಚಾರ ಮಾಡುತ್ತಾರೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಶನಿವಾರ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಮಂಜೂರಾದ ರೂ. 13 ಕೋಟಿ ವೆಚ್ಚದಲ್ಲಿ ನಡೆಯಲಿರುವ ಕಬಕ- ವಿಟ್ಲ- ಸಾಲೆತ್ತೂರು- ಮಾರ್ನಬೈಲ್ ರಸ್ತೆ ಅಗಲೀಕರಣ ಕಾಮಗಾರಿಗೆ ಕಬಕದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ವಿಟ್ಲ- ಕಬಕ ರಸ್ತೆಯನ್ನು ಚತುಷ್ಪಥ ಮಾಡುವ ಯೋಚನೆ ಇದೆ ಕಬಕ- ವಿಟ್ಲ ರಸ್ತೆಯ ಅಭಿವೃದ್ಧಿಯ ವಿಚಾರದಲ್ಲಿ ಕೆಲವರು ಇತ್ತೀಚೆಗೆ ಪ್ರತಿಭಟನೆ ಹೆಸರಿನಲ್ಲಿ ಬೀದಿನಾಟಕ ಮಾಡಿದ್ದಾರೆ. ಅವರಿಗೆ ನಾವು ಅಭಿವೃದ್ಧಿ ಮೂಲಕ ಉತ್ತರ ನೀಡುತ್ತಿದ್ದೇವೆ. ರಸ್ತೆ ದ್ವಿಪಥ ಕಾಮಗಾರಿ ಇಂದಿನಿಂದಲೇ ಆರಂಭಗೊಳ್ಳಲಿದ್ದು, 2 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಹೊಸ ವರ್ಷದ ಆರಂಭವನ್ನೇ ಹೊಸ ರಸ್ತೆಯ ಮೂಲಕ ಮಾಡಲು ಅವಕಾಶ ಮಾಡಿಕೊಡಲಿದ್ದೇವೆ.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಯಾವ ಶಾಸಕರೂ ಮಾಡದೇ ಇರುವ ಸಾಧನೆಯನ್ನು ಮಠಂದೂರು ಮಾಡಿದ್ದಾರೆ. ಇದನ್ನು ಸಹಿಸಲಾಗದವರು ಸುಳ್ಳು ಆರೋಪ ಮಾಡುತ್ತಿದ್ದಾರೆ. 2022-23ನೇ ಸಾಲಿನಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಬಜೆಟ್‍ನಲ್ಲಿ ಪುತ್ತೂರಿನ 4 ಕಾಮಗಾರಿಗಳಿಗೆ 4 ಕೋಟಿ ರೂ. ಇಡಲಾಗಿದೆ ಎಂದರು.
ಲೋಕೋಪಯೋಗಿ ಇಲಾಖೆಯ ಬಂಟ್ವಾಳ ಉಪ ವಿಭಾಗದ ಎಂಜಿನಿಯರ್ ಪ್ರೀತಂ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಳ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಇಡ್ಕಿದು ಗ್ರಾಪಂ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಕಬಕ ಗ್ರಾಪಂ ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗ, ವಿಟ್ಲಮುಡ್ನೂರು ಗ್ರಾಪಂ ಅಧ್ಯಕ್ಷ ಜಯಪ್ರಕಾಶ್ ನಾಯ್ಕ್ ಉಪಸ್ಥಿತರಿದ್ದರು.
ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಕಾರ್ಯಕ್ರಮ ನಿರ್ವಹಿಸಿದರು.