ಕರ್ನಾಟಕ ಥಿಯೊಲಾಜಿಕಲ್ ಕಾಲೇಜಿನಲ್ಲಿ ಡಾ.ಕಿಟ್ಟೆಲ್ ಪ್ರತಿಮೆ ಅನಾವರಣ

ಮಂಗಳೂರು: ಕರ್ನಾಟಕ ಥಿಯೋಲಾಜಿಕಲ್ ಕಾಲೇಜು(ಕೆಟಿಸಿ) ಬಲ್ಮಠ ಇದರ ಆವರಣದಲ್ಲಿ ಶನಿವಾರ ಡಾ.ಕಿಟ್ಟೆಲ್ ಪ್ರತಿಮೆಯನ್ನು ಕಿಟ್ಟೆಲ್ ಅವರ ಮರಿಮಗಳು ಅಲ್ಮುಥ್ ಬಾರ್ಬರಾ ಎಲೆನೊರೆ ಮೈಯರ್(ಕಿಟ್ಟೆಲ್) ಅನಾವರಣಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು, ನನ್ನ ಮುತ್ತಜ್ಜನ ಬಗ್ಗೆ ಅಜ್ಜ ಹೇಳಿದ್ದನ್ನು ಕೇಳಿದ್ದೇನೆ. ಇಲ್ಲಿನ ಜನರಿಗೆ ಅವರ ಬಗ್ಗೆ ಇದ್ದ ಅಭಿಮಾನ ನೋಡಿ ಸಂತಸವಾಗಿದೆ. ಧಾರವಾಡ ಹಾಗೂ ಮಂಗಳೂರಿಗೆ ಭೇಟಿ ನೀಡಿ ತೃಪ್ತಳಾಗಿದ್ದೇನೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡದ ಹಿರಿಯ ವಿದ್ವಾಂಸ ಪ್ರೊ.ಡಾ.ಬಿ.ಎ.ವಿವೇಕ ರೈ ಮಾತನಾಡಿ, ಜರ್ಮನಿಯಿಂದ ಬಂದು ರಾಜ್ಯದಲ್ಲಿ ಕನ್ನಡ ಭಾಷೆ, ವ್ಯಾಕರಣಕ್ಕೆ ಅಪೂರ್ವ ಕೊಡುಗೆ ನೀಡಿರುವ ರೆ.ಡಾ. ಫರ್ಡಿನಾಂಡ್ ಕಿಟ್ಟೆಲ್ ಅವರು ಒಂದು ಹಂತದಲ್ಲಿ ಬಾಸೆಲ್ ಮಿಷನ್ ಸುಪೀರಿಯರ್‌ಗಳಿಂದ ತಾವು ಕ್ರೈಸ್ತ ಮತಪ್ರಚಾರದ ಕೆಲಸವನ್ನು ಮಾಡುತ್ತಿಲ್ಲ, ಕೇವಲ ಕನ್ನಡ ಪರಿಚಾರಿಕೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೂ ಒಳಗಾಗಿದ್ದರು. ಆದರೆ ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಅವರು ಕನ್ನಡದ ಕೆಲಸ ಮುಂದುವರಿಸಿ ಜನಾನುರಾಗಿಯಾ ಗಿದ್ದರು ಎಂದರು.
ಕಿಟ್ಟೆಲ್ ಅವರು 1853ರಲ್ಲಿ ಮುಂಬೈಗೆ ಆಗಮಿಸಿ, ಬಳಿಕ ಧಾರವಾಡಕ್ಕೆ ಬಂದರು. ಬಂದ ಪ್ರಾರಂಭದಲ್ಲೇ ಕನ್ನಡವನ್ನು ಕಲಿತು ಆ ಬಳಿಕ ಕನ್ನಡ ಕೃತಿ ರಚನೆ, ಭಾಷಾಂತರ, ವ್ಯಾಕರಣ ರಚನೆ, ಛಂದಸ್ಸು, ಸಮಗ್ರ ಮಾಹಿತಿ ಇರುವ ಪಠ್ಯಪುಸ್ತಕ ರಚನೆಯಂತಹ ಕೆಲಸಗಳನ್ನು ಮಾಡಿದ್ದರು ಎಂದು ಡಾ. ವಿವೇಕ ರೈ ಹೇಳಿದರು.
ಕಿಟ್ಟೆಲ್ ಅವರ ಮರಿಮರಿಮಗ ವೈ.ಪ್ಯಾಟ್ರಿಕ್ ಮೈಯರ್ ಮಾತನಾಡಿ, ಮುತ್ತಜ್ಜನ ತಂದೆಯಾದ ಕಿಟ್ಟೆಲ್ ಅವರು ಬೆಸೆದಿರುವ ಎರಡು ದೇಶಗಳ ಬಾಂಧವ್ಯದ ಬೆಸುಗೆಯನ್ನು ಇನ್ನಷ್ಟು ಬೆಸೆಯುವ ಇರಾದೆ ಇದೆ ಎಂದರು.
ಜರ್ಮನ್ ಸರಕಾರದ ಕೌನ್ಸುಲ್ ಜನರಲ್ ಫ್ರೆಡರಿಕ್ ಬಿರ್ಗೆಲಿನ್ ಅವರು ಮಾತನಾಡಿ, ಡಾ.ಕಿಟ್ಟೆಲ್ ಅವರು ನಮ್ಮೆರಡು ದೇಶಗಳ ಹಾಗೂ ಸಂಸ್ಕೃತಿಗಳ ನಡುವೆ ಇದ್ದ ಸೇತುವೆಯಂತೆ. ಮಿಶನರಿಯಾಗಿದ್ದುಕೊಂಡು ಕನ್ನಡದ ಕುರಿತು ವಿಸ್ತಾರವಾದ ಸೇವೆ ಮಾಡಿದ ಕಿಟ್ಟೆಲ್ ಬಗ್ಗೆ ಇಲ್ಲಿನ ಜನರಿಗೆ ಇರುವ ಪ್ರೀತಿ ನೋಡಿ ವಿಸ್ಮಿತನಾಗಿದ್ದೇನೆ ಎಂದರು.
ಕೆಟಿಸಿ ನಿವೃತ್ತ ಪ್ರಾಂಶುಪಾಲ ಡಾ.ಸಿ.ಎಲ್.ಫುರ್ತಾದೊ, ಕನ್ನಡ ವಿದ್ವಾಂಸ ಡಾ.ಎ.ವಿ.ನಾವಡ, ಬೆಂಗಳೂರಿನ ಯುನೈಟೆಡ್ ಥಿಯೊಲಾಜಿಕಲ್ ಕಾಲೇಜಿನ ಡಾ.ಗುಡ್ರುನ್ ಲ್ಯೊವ್ನರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಶ್ರೀನಾಥ್, ಮನಪಾ ವಿಪಕ್ಷ ನಾಯಕ ನವೀನ್ ಡಿಸೋಜ ಉಪಸ್ಥಿತರಿದ್ದರು.
ಕೆಟಿಸಿ ಪ್ರಾಂಶುಪಾಲ ಡಾ.ಎಚ್.ಎಂ.ವಾಟ್ಸನ್ ಅಧ್ಯಕ್ಷತೆ ವಹಿಸಿದ್ದರು. ಡಾ.ಸಂದೀಪ್ ಸ್ವಾಗತಿಸಿದರು.