ಮಧುಮೇಹ ಕಾಯಿಲೆಯ ಬಗ್ಗೆ ನಿರ್ಲಕ್ಷ್ಯ ಬೇಡ: ಅಬ್ದುಲ್ ರೆಹಮಾನ್
ಕಣಚೂರು ಸಂಸ್ಥೆಯಲ್ಲಿ ವಿಶ್ವ ಮಧುಮೇಹ ದಿನಾಚರಣೆ

ಮಂಗಳೂರು: ಮಧುಮೇಹ ಕಾಯಿಲೆಯು ಮಾರಣಾಂತಿಕವಾಗಿದೆ. ದೇಹದ ಆರೋಗ್ಯ ಮತ್ತು ವಿವಿಧ ಅಂಗಗಳ ಮೇಲೆ ದುಷ್ಪರಿಣಾಮ ಬೀರಿದೆ. ಈ ಕಾಯಿಲೆಯ ಬಗ್ಗೆ ನಿರ್ಲಕ್ಷ್ಯಬೇಡ. ಈ ಬಗ್ಗೆ ಮುಂಜಾಗ್ರತೆ ವಹಿಸಬೇಕಿದೆ, ಜಾಗೃತಿ ಮೂಡಿಸಬೇಕಿದೆ ಎಂದು ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ರೆಹಮಾನ್ ಹೇಳಿದರು.
ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಶನಿವಾರ ಸಂಸ್ಥೆಯ ಸಭಾಂಗಣದಲ್ಲಿ ನಡೆದ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆಯ ಪ್ರಾಂಶುಪಾಲ ಪ್ರೊ.ಕೆ.ಜಿ.ಕಿರಣ್ ಮಾತನಾಡಿ ದೇಶದಲ್ಲಿ ಶೇ.11.2 ಜನರು ಈ ಮಾರಕ ಕಾಯಿಲೆಗೆ ತುತ್ತಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಸಂಘಟನಾ ಸಮಿತಿಯ ಅಧ್ಯಕ್ಷ ಹಾಗೂ ವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ದೇವದಾಸ್ ರೈ ಕಾಯಿಲೆಯ ಲಕ್ಷಣ ಮತ್ತು ಚಿಕಿತ್ಸಾ ಕ್ರಮಗಳ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಪ್ರೊ.ಡಾ. ಹರೀಶ್ ಶೆಟ್ಟಿ, ಮುಖ್ಯ ಆಡಳಿತ ಅಧಿಕಾರಿ ಡಾ. ರೋಹನ್ ಮೋನಿಸ್, ಕರ್ನಾಟಕ ವೈದ್ಯಕೀಯ ಮಂಡಳಿಯ ಸದಸ್ಯ ಡಾ.ಜಿ.ಕೆ.ಭಟ್ ಉಪಸ್ಥಿತರಿದ್ದರು.
ಕಾರ್ಯಗಾರದಲ್ಲಿ ಡಾ. ಶ್ರೀಪತಿ ಕಾಮತ್, ಡಾ. ಪ್ರವೀಣ್ ರಾಮಚಂದ್ರ, ಡಾ. ಪ್ರಶಾಂತ್, ಡಾ.ಶ್ರೀನಾಥ್ ಶೆಟ್ಟಿ, ಡಾ. ಸೌರಭ್ ಭಟ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಸಂಘಟನಾ ಕಾರ್ಯದರ್ಶಿ ಡಾ. ಶ್ರೀಕಾಂತ್ ಹೆಗ್ಡೆ ವಂದಿಸಿದರು. ಡಾ. ಭರತ್ ಗೌಡ ಮತ್ತು ಖತೀಜತ್ ತೌಶಿಜಾ ಕಾರ್ಯಕ್ರಮ ನಿರೂಪಿಸಿದರು.