ಅಡ್ಡಂಡ ಕಾರ್ಯಪ್ಪ ನಿರ್ದೇಶನದ ಟಿಪ್ಪು ನಾಟಕ ಪ್ರದರ್ಶನಕ್ಕೆ ತಡೆಯಾಜ್ಞೆ ತರುತ್ತೇವೆ: ಶಾಸಕ ತನ್ವೀರ್ ಸೇಠ್
''ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣ ಖಚಿತ''
ಮೈಸೂರು: 'ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರ ಟಿಪ್ಪುವಿನ (Tipu Sultan) ಕನಸುಗಳು ಕೃತಿ ಬಿಡುಗಡೆಗೆ ನಮ್ಮ ಅಭ್ಯಂತರ ಇಲ್ಲ. ಆದರೆ ನಾಟಕ ಪ್ರದರ್ಶನ ಮಾಡದಂತೆ ನ್ಯಾಯಾಲಯದಿಂದ ತಡಯಾಜ್ಞೆ ತರಲಾಗುವುದು' ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಟಿಪ್ಪು ಸುಲ್ತಾನ್ ಈ ನಾಡಿನ ಮಗ, ಅವರ ಬಗ್ಗೆ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಟಿಪ್ಪುವಿನ ಕನಸುಗಳು ಕೃತಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಇದಕ್ಕೆ ನಮ್ಮ ಅಭ್ಯಂತರವೇನು ಇಲ್ಲ. ಆದರೆ ಕೃತಿಯ ಆಧಾರ ಇಟ್ಟುಕೊಂಡು ನಾಟಕ ಪ್ರದರ್ಶನ ಮಾಡದಂತೆ ಸೋಮವಾರ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲು ನಿರ್ಧರಿಸಲಾಗಿದೆ'' ಎಂದು ಹೇಳಿದರು.
''ಟಿಪ್ಪು ಸುಲ್ತಾನ್ ಪ್ರತಿಮೆ ಸ್ಥಾಪಿಸಲು ನಮ್ಮ ಸಮುದಾಯದ ಮುಖಂಡರುಗಳ ಜೊತೆ ಚರ್ಚಿಸಲಾಗಿದೆ. ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಪ್ರತಿಮೆ ನಿರ್ಮಾಣ ಖಚಿತ ಎಂದ ಅವರು, ಕಂಚು ಅಥವಾ ಬೇರೆ ಯಾವುದರಿಂದ ಪ್ರತಿಮೆ ನಿರ್ಮಾಣ ಮಾಡಬೇಕು ಎಂಬುದರ ಬಗ್ಗೆ ಶೀಘ್ರದಲ್ಲೇ ತೀರ್ಮಾನಿಸಲಾಗುವುದು'' ಎಂದು ಹೇಳಿದರು.
''ನಮ್ಮ ಗ್ರಂಥದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಇಲ್ಲ ನಿಜ. ಆದರೆ ಟಿಪ್ಪುವಿನ ಸಾಧನೆ ಜನಪರ ಕಾರ್ಯಕ್ರಮ ಹಾಗೂ ಅವರ ಧೈರ್ಯ ಎಲ್ಲವು ಇತಿಹಾಸದಲ್ಲಿದೆ. ಇದನ್ನು ಬಿಂಬಿಸಲು ಟಿಪ್ಪು ಪ್ರತಿಮೆ ನಿರ್ಮಾಣ ಅವಶ್ಯಕತೆ ಇದೆ. ಈ ಬಗ್ಗೆ ನಮ್ಮ ಧರ್ಮ ಗುರುಗಳ ಜೊತೆ ಚರ್ಚಿಸಲಾಗಿದೆ'' ಎಂದು ಹೇಳಿದರು.
''ಇಂದಿನ ಪರಿಸ್ಥಿತಿಯಲ್ಲಿ ಪ್ರತಿ ನಿರ್ಮಾಣ ಅನಿವಾರ್ಯವಾಗಿದೆ. ಪ್ರತಿಮೆ ನಿರ್ಮಾಣಕ್ಕೂ ಮೊದಲೇ ಕೆಡುವುದಾಗಿ ಹೇಳಿಕೆಗಳು ಬಂದಿವೆ. ಯಾರ ವಿರೋಧಕ್ಕೂ ನಾವು ಬಗ್ಗುವುದಿಲ್ಲ'' ಎಂದು ತಿಳಿಸಿದರು.