ದಿಢೀರ್ ಕೋವಿಡ್ ಪ್ರಕರಣ ಹೆಚ್ಚಳ ನಿರ್ಬಂಧ ಬಿಗಿಗೊಳಿಸಿದ ಚೀನಾ

ಬೀಜಿಂಗ್, ನ.12: ಚೀನಾದಲ್ಲಿ ಕೋವಿಡ್ ಸೋಂಕು(covid infection) ಪ್ರಕರಣ ದಿಢೀರನೆ ಹೆಚ್ಚಿರುವುದರಿಂದ ಮತ್ತೆ ಕಠಿಣ ನಿರ್ಬಂಧ ಜಾರಿಯಾಗಿದೆ. ದಕ್ಷಿಣದ ಪ್ರಮುಖ ಪ್ರಾಂತ ಗುವಾಂಗ್‌ಝಾ(Guangzhou)ವು ಜಿಲ್ಲೆಯಲ್ಲಿ ಒಂದೇ ದಿನ 3,775 ಹೊಸ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಸುಮಾರು 1.8 ದಶಲಕ್ಷ ಜನತೆ ಶನಿವಾರ ಮನೆಯಲ್ಲೇ ಇದ್ದು ಕೋವಿಡ್ ಸೋಂಕು ಪರೀಕ್ಷೆಗೆ ಒಳಗಾಗಬೇಕು ಎಂದು ಆಡಳಿತ ಸೂಚಿಸಿದೆ.
ಈ ಮಧ್ಯೆ ದಕ್ಷಿಣ ಚೀನಾದ ಬಹುತೇಕ ನಗರಗಳಲ್ಲಿನ ಶಾಲೆಗಳನ್ನು ಮುಚ್ಚಲಾಗಿದೆ. ರಾಷ್ಟ್ರಾದ್ಯಂತ ಶನಿವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಯ ಅವಧಿಯಲ್ಲಿ 11,773 ಹೊಸ ಸೋಂಕು ಪ್ರಕರಣ ದಾಖಲಾಗಿದೆ. ಇದು ಅಷ್ಟೇನೂ ಅಧಿಕ ಪ್ರಮಾಣವಲ್ಲದಿದ್ದರೂ, ಶೂನ್ಯ ಕೋವಿಡ್ ನೀತಿಗೆ ಎದುರಾಗಿರುವ ಸವಾಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಮಧ್ಯೆ, ಚೀನಾಕ್ಕೆ ಆಗಮಿಸುವ ಪ್ರವಾಸಿಗರಿಗೆ ನಿಗದಿಯಾಗಿರುವ ಕನಿಷ್ಟ ಕ್ವಾರಂಟೈನ್(Quarantine) ಅವಧಿಯನ್ನು 7ದಿನದಿಂದ 5 ದಿನಕ್ಕೆ ಇಳಿಸಲಾಗಿದೆ. ವಿದೇಶದ ಉದ್ಯಮಿಗಳು, ಕ್ರೀಡಾಳುಗಳು ಸೋಂಕು ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ (ಕ್ವಾರಂಟೈನ್‌ಗೆ ಒಳಪಡದೆ)ತಿರುಗಾಡಲು ಅವಕಾಶವಿದೆ. ಆದರೆ, ಈಗಲೂ ಶೂನ್ಯ ಕೋವಿಡ್ ಕಾರ್ಯಯೋಜನೆ ಜಾರಿಯಲ್ಲಿದೆ ಎಂದು ಸರಕಾರ ಘೋಷಿಸಿದೆ.
ಸೂಪರ್ ಮಾರ್ಕೆಟ್ ಅಥವಾ ಸಾರ್ವಜನಿಕ ಕಟ್ಟಡಗಳಿಗೆ ಭೇಟಿ ನೀಡಬೇಕಿದ್ದರೆ, ಆಯಾ ದಿನ ನಡೆಸುವ ಪರೀಕ್ಷೆಯ ನೆಗೆಟಿವ್ ಪ್ರಮಾಣಪತ್ರ ಹೊಂದಿರಬೇಕು. ಗುವಾಂಗ್‌ಝಾವೊದಲ್ಲಿ ಶಾಲೆಗಳನ್ನು ಮುಚ್ಚಲಾಗಿದ್ದು ಬಸ್ಸು, ರೈಲು ಸಂಚಾರವೂ ಸ್ಥಗಿತಗೊಂಡಿದೆ. ಇಲ್ಲಿಂದ ಬೀಜಿಂಗ್ ಹಾಗೂ ಇತರ ಪ್ರಮುಖ ನಗರಗಳಿಗೆ ವಿಮಾನ ಸಂಚಾರ ರದ್ದಾಗಿದೆ. ನೈಋತ್ಯದ ಕೈಗಾರಿಕಾ ನಗರ ಚೋಂಗ್‌ಖ್ವಿಗ್‌ನ ಕೆಲವು ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ ಎಂದು ವರದಿಯಾಗಿದೆ.