ನಾರಾವಿ: ಮಹಿಳೆಯ ಕೈಕಾಲು ಕಟ್ಟಿಹಾಕಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದರೋಡೆ

ವೇಣೂರು: ಒಂಟಿ ಮಹಿಳೆಯ ಮನೆಗೆ ನುಗ್ಗಿದ ನಾಲ್ವರು ಮುಸುಕುದಾರಿಗಳು ಮಹಿಳೆಯ ಕೈಕಾಲು ಕಟ್ಟಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಶನಿವಾರ ಸಂಜೆ ನಡೆದಿರುವುದಾಗಿ ವರದಿಯಾಗಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಳ್ತಂಗಡಿ ತಾಲೂಕಿನ ನಾರಾವಿ ಸಮೀಪದ ಅರಸಿಕಟ್ಟೆಯ ಪ್ರಭಾವತಿ ನಾಯ್ಕ (೬೭) ಮನೆಯಲ್ಲಿ ಈ ದರೋಡೆ ಪ್ರಕರಣ ನಡೆದಿದೆ. ಪ್ರಭಾವತಿ ನಾಯ್ಕರ ಮನೆಗೆ ಏಕಾಏಕಿ ನುಗ್ಗಿದ ಮುಸುಕುದಾರಿಗಳು ಅವರ ಬಾಯಿಗೆ ಬಟ್ಟೆ ತುರುಕಿಸಿ ಹಗ್ಗದಿಂದ ಕೈಕಾಲನ್ನು ಕಟ್ಟಿ ಹಾಕಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ಕಿವಿಯಲ್ಲಿದ್ದ ಬೆಂಡೋಲೆಯನ್ನು ಬಲಾತ್ಕಾರವಾಗಿ ತೆಗೆದಿದ್ದಾರೆ.
ಬಳಿಕ ಮನೆಯೊಳಗಿದ್ದ ೩ ಚಿನ್ನದ ಬಳೆಗಳು, ೩ ಚಿನ್ನದ ಉಂಗುರಗಳು, ಚಿನ್ನದ ಚೈನ್ ಹಾಗೂ ಒಂದು ಮೊಬೈಲ್‌ನ್ನು ದೋಚಿ "ಎಂಕ್ಲು ಬತ್ತಿನಾ ಕೆಲಸ ಆಂಡ್'' ಎಂದು ತುಳುವಿನಲ್ಲಿ ಹೇಳುತ್ತಲೇ ದರೋಡೆಕೋರರು ಪರಾರಿಯಾಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿತರು ದೋಚಿದ ಚಿನ್ನದ ಅಂದಾಜು ಮೌಲ್ಯ ಒಟ್ಟು ರೂ. ೪,೬೦,೦೦೦ ಆಗಬಹುದೆಂದು ಅಂದಾಜಿಸಲಾಗಿದೆ. ವೇಣೂರು ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸೌಮ್ಯ ಜೆ. ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
