ಮಾನಸಿಕ ನೆಮ್ಮದಿಯಿಂದ ಆರೋಗ್ಯ ಉತ್ತಮವಾಗಿರಲು ಸಾಧ್ಯ: ಡಾ.ವಿಜಯ ಬಲ್ಲಾಳ್

ಉಡುಪಿ: ಆಧ್ಯಾತ್ಮಿಕ ಮನೋಭಾವ ಹಾಗೂ ಮನಸ್ಸಿಗೆ ನೆಮ್ಮದಿ ಇದ್ದಲ್ಲಿ ಆರೋಗ್ಯ ಉತ್ತಮವಾಗಿರಲು ಸಾಧ್ಯ. ಜೀವನ ಕ್ರಮ, ಆಹಾರದಲ್ಲಿ ಬದಲಾವಣೆಯಿಂದ ಮಧುಮೇಹದಿಂದ ನಿಯಂತ್ರಿಸಲು ಸಾಧ್ಯ ಎಂದು ಅಂಬಲ ಪಾಡಿ ಮಹಾಕಾಳಿ ಜನಾರ್ದನ ದೇವಸ್ಥಾನದ ಧರ್ಮದರ್ಶಿ ಡಾ.ನಿ. ಬೀ.ವಿಜಯ ಬಲ್ಲಾಳ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಉಡುಪಿ ಜಿಲ್ಲಾಸ್ಪತ್ರೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಜಾಗೃತಿ ಜಾಥ ಹಾಗೂ ಉಚಿತ ಮಧುಮೇಹ ತಪಾಸಣೆ ಮತ್ತು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಎಣ್ಣೆಯಂತಹ ತಿಂಡಿ ತಿನಿಸುಗಳ ಸೇವನೆ ಕಡಿಮೆ ಮಾಡಿದ್ದಲ್ಲಿ ಆರೋಗ್ಯಕರ ವಾಗಿರಲು ಸಾಧ್ಯ. ವೈದ್ಯರು ನೀಡುವ ಸಲಹೆಗಳನ್ನು ಪ್ರತಿಯೊಬ್ಬರು ಪಾಲಿಸ ಬೇಕು. ಜನರು ದುಶ್ಚಟಗಳಿಂದ ಬಲಿಯಾಗದಂತೆ ಅರಿವು ಮೂಡಿಸಬೇಕು. ಇದು ಪ್ರತಿಯೊಬ್ಬರು ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಐಎಂಎ ಉಡುಪಿ ಕರಾವಳಿ ಅಧ್ಯಕ್ಷ ಡಾ.ಪಿ.ವಿ.ಭಂಡಾರಿ ವಹಿಸಿದ್ದರು. ಹಿರಿಯ ಪಿಜಿಶಿಯನ್ ಡಾ.ಆರ್.ಎನ್.ಭಟ್, ಫಿಸಿಯೋ ಥೆರಪಿಸ್ಟ್ ಡಾ.ಸ್ನೇಹಾ ಆಚಾರ್ಯ, ಐಎಂಎ ಕಾರ್ಯದರ್ಶಿ ಡಾ.ಕೇಶವ ನಾಯಕ್, ಕೋಶಾಧಿಕಾರಿ ಡಾ.ದೀಪಕ್ ಮಲ್ಯ ಉಪಸ್ಥಿತರಿದ್ದರು.
ಸ್ತ್ರೀರೋಗ ತಜ್ಞೆ ಡಾ.ಇಂದಿರಾ ಶಾನುಭಾಗ್ ವಂದಿಸಿದರು. ಡಯಾಬಿಟೋ ಲಾಜಿಸ್ಟ್ ಡಾ.ಶ್ರುತಿ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.
ವಾಕಥಾನ್- ಜಾಗೃತಿ ಜಾಥ
ಇದಕ್ಕೂ ಮುನ್ನಾ ಉಡುಪಿ ಬೋರ್ಡ್ ಹೈಸ್ಕೂಲ್‌ನಿಂದ ಅಂಬಲಪಾಡಿ ದೇವಸ್ಥಾನದವರೆಗೆ ವಾಕಥಾನ್ ಮಧುಮೇಹ ಜಾಗೃತಿ ಜಾಥ ನಡೆಯಿತು. ಇದರಲ್ಲಿ ನಗರದ ವಿವಿಧ ಕಾಲೇಜುಗಳ ನರ್ಸಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜಾಥಕ್ಕೆ ಚಾಲನೆ ನೀಡಿದ ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್ ಮಾತನಾಡಿ, ಭಾರತವು ಮಧು ಮೇಹದ ರಾಜಧಾನಿಯಾಗುವ ಅಪಾಯವಿದೆ. ಜಗತ್ತಿನ ಒಟ್ಟು ಮಧುಮೇಹ ರೋಗಿ ಗಳಲ್ಲಿ ಶೇ.25ರಷ್ಟು ಭಾರತದಲ್ಲಿರುವುದು ಗಂಭೀರವಾಗಿದೆ. ಉತ್ತಮ ಶಿಸ್ತುಬದ್ಧ ಜೀವನ ಪದ್ಧತಿ ಆಹಾರ ಪದ್ಧತಿಯಿಂದ ಈ ರೋಗವನ್ನು ದೂರ ಮಾಡಲು ಸಾಧ್ಯ ಎಂದರು.









